ಕಾರ್ಕಳ, ಸೆ. 03 (DaijiworldNews/AA): ಕಾರ್ಕಳದ ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ 9ನೇ ತರಗತಿ ವಿದ್ಯಾರ್ಥಿನಿ ಶಗುನ್ ಎಸ್ ವರ್ಮಾ ಹೆಗ್ಡೆ, 15 ವರ್ಷದೊಳಗಿನ ಬಾಲಕಿಯರ ಮುಂಬರುವ ಅಂತಾರಾಷ್ಟ್ರೀಯ ಯೂನಿವರ್ಸಿಟಿ ವಾಲಿಬಾಲ್ ಪಂದ್ಯಾವಳಿಗೆ ರಾಷ್ಟ್ರೀಯ ಅರ್ಹತಾ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಉಡುಪಿ ಜಿಲ್ಲೆಗೆ ಗೌರವ ತಂದಿದ್ದಾರೆ.

ರಾಷ್ಟ್ರೀಯ ಶಾಲಾ ಕ್ರೀಡಾ ಒಕ್ಕೂಟವು ನಡೆಸಿದ ಪಂದ್ಯಾವಳಿಯಲ್ಲಿ, ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ಆಯ್ಕೆ ಶಿಬಿರದಲ್ಲಿ ಸುಮಾರು 200 ಆಟಗಾರ್ತಿಯರು ಭಾಗವಹಿಸಿದ್ದರು. ಈ ಸ್ಪರ್ಧಾತ್ಮಕ ಪ್ರಕ್ರಿಯೆಯಿಂದ 23 ಆಟಗಾರ್ತಿಯರು ಅಂತಿಮ ಪಟ್ಟಿಗೆ ಆಯ್ಕೆಯಾದರು. ಇವರಲ್ಲಿ, ಶಗುನ್ ಎರಡನೇ ರ್ಯಾಂಕ್ ಆಟಗಾರ್ತಿಯಾಗಿ ಮತ್ತು ಕರ್ನಾಟಕದಿಂದ ಏಕೈಕ ಪ್ರತಿನಿಧಿಯಾಗಿಯಾಗಿದ್ದಾರೆ.
ಇದಕ್ಕೂ ಮೊದಲು, ಶಗುನ್ ಎಸ್ ವರ್ಮಾ ರಾಜ್ಯ ಮಟ್ಟದ ಆಯ್ಕೆ ಶಿಬಿರಕ್ಕೆ ಅರ್ಹತೆ ಪಡೆದ ಉಡುಪಿ ಜಿಲ್ಲೆಯ ಏಕೈಕ ಆಟಗಾರ್ತಿಯಾಗಿದ್ದರು. ಕರ್ನಾಟಕದಿಂದ ಭಾಗವಹಿಸಿದ ಎಂಟು ಮಂದಿಯ ಪೈಕಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಶಗುನ್ ಏಕೈಕ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಶಗುನ್ ಎಸ್ ವರ್ಮಾ ಅವರು ಸಂದೇಶ್ ವರ್ಮಾ ಮತ್ತು ಶೃತಿರಾಜ್ ದಂಪತಿಯ ಪುತ್ರಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಾವಳಿಯು ಇದೇ ಡಿಸೆಂಬರ್ 4 ರಿಂದ ಡಿಸೆಂಬರ್ 13 ರವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯಲಿದೆ.