ನವದೆಹಲಿ, ಅ. 07 (DaijiworldNews/AK): ಅಕ್ಟೋಬರ್ 15 ರಿಂದ ಶುರುವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ಉಪನಾಯಕರಾಗಿ ಕಾಣಿಸಿಕೊಂಡಿದ್ದ ಮನೀಶ್ ಪಾಂಡೆಗೆ ಈ ಬಾರಿ ಸ್ಥಾನ ಸಿಕ್ಕಿಲ್ಲ.

ಕಳೆದ ಸೀಸನ್ನಲ್ಲಿ ವಿದರ್ಭ ತಂಡದ ಪರ ಕಣಕ್ಕಿಳಿದಿದ್ದ ಕರ್ನಾಟಕದ ಸ್ಟಾರ್ ಬ್ಯಾಟರ್ ಕರುಣ್ ನಾಯರ್ ರಾಜ್ಯ ತಂಡಕ್ಕೆ ಮರಳಿದ್ದಾರೆ. ಇನ್ನು ಈ ಬಾರಿ ಹೆಸರಿಸಲಾದ ತಂಡದಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೃತಿಕ್ ಕೃಷ್ಣ ಮತ್ತು ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಡಗೈ ಸ್ಪಿನ್ನರ್ ಹಾರ್ದಿಕ್ ರಾಜ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಹಾಗೆಯೇ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಹಾಗೂ ಪ್ರಸಿದ್ಧ್ ಕೃಷ್ಣ ಅವರನ್ನು ರಣಜಿ ಟೂರ್ನಿಗೆ ಪರಿಗಣಿಸಲಾಗಿಲ್ಲ.
ಸದ್ಯ ಮೊದಲ ಪಂದ್ಯಕ್ಕೆ ಮಾತ್ರ ತಂಡವನ್ನು ಪ್ರಕಟಿಸಲಾಗಿದ್ದು, ಈ ಪಂದ್ಯದ ನಂತರ ಉಳಿದ ಮ್ಯಾಚ್ಗಳಿಗೆ ಕರ್ನಾಟಕ ತಂಡವನ್ನು ಮತ್ತೆ ಹೆಸರಿಸಲಾಗುತ್ತದೆ. ಈ ವೇಳೆ ದೇವದತ್ ಪಡಿಕ್ಕಲ್ ಹಾಗೂ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಅದರಂತೆ ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕಾಗಿ ಕರ್ನಾಟಕ ತಂಡ ಈ ಕೆಳಗಿನಂತಿದೆ
ಕರ್ನಾಟಕ ರಣಜಿ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್, ಆರ್. ಸ್ಮರಣ್, ಕೆಎಲ್ ಶ್ರೀಜಿತ್ (ವಿಕೆಟ್ ಕೀಪರ್), ಕೆವಿ ಅನೀಶ್, ಅಭಿನವ್ ಮನೋಹರ್, ನಿಕಿನ್ ಜೋಸ್, ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಶಿಖರ್ ಶೆಟ್ಟಿ, ಮೊಹ್ಸಿನ್ ಖಾನ್, ಅಭಿಲಾಷ್ ಶೆಟ್ಟಿ, ಎಂ. ವೆಂಕಟೇಶ್.