ಲಂಡನ್, ಜು 02 (Daijiworld News/SM): ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲನುಭವಿಸಿದ್ದು, ಇದರ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಆ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟೀಂ ಇಂಡಿಯಾದ ಆಲ್ ರೌಂಡರ್ ಆಟಗಾರ ವಿಜಯ್ ಶಂಕರ್ ಕಾಲಿನ ಬೆರಳಿಗೆ ಗಾಯಗೊಂಡು ವಿಶ್ವಕಪ್ ನಿಂದಲೇ ಹೊರಬಿದ್ದಿದ್ದಾರೆ.
ನೆಟ್ಸ್ ನಲ್ಲಿ ಅಭ್ಯಾಸ ನಡೆಸುವ ಸಂದರ್ಭ ಜಸ್ಪ್ರೀತ್ ಬುಮ್ರಾ ಎಸೆದ ಯಾರ್ಕರ್ ಎಸೆತ ವಿಜಯ್ ಶಂಕರ್ ಕಾಲಿಗೆ ತಾಗಿತ್ತು. ಆದರೆ ಗಾಯದ ಪ್ರಮಾಣ ಹೆಚ್ಚಿರಲಿಲ್ಲ. ಆದರೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಜಯ್ ಕಣಕ್ಕಿಳಿದಿರಲಿಲ್ಲ. ಶೀಘ್ರ ಗುಣಮುಖರಾಗಿ ಅವರು ತಂಡಕ್ಕೆ ಮರಳಲಿದ್ದಾರೆ ಎಂದು ಟೀಂ ಮ್ಯಾನೇಜ್ಮೆಂಟ್ ಹೇಳಿತ್ತು.
ಆದರೆ ಈಗ ವಿಜಯ್ ಗಾಯದ ಗಂಭೀರತೆ ಹೆಚ್ಚಾಗಿದೆ. ಅಲ್ಲದೆ ಅವರಿಗೆ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದೆ. ಹೀಗಾಗಿ ಅವರು ತಂಡದಿಂದ ಹೊರಬೀಳಬೇಕಾಗಿದೆ. ವಿಜಯ್ ಶಂಕರ್ ರಿಂದ ತೆರವಾದ ಸ್ಥಾನಕ್ಕೆ ಕ್ನನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಇನ್ನು ಈ ಹಿಂದೆ ಆರಂಭಿಕ ಆಟಗಾರ ಹಾಗೂ ಸ್ಪೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ.