ಮುಂಬೈ, ಅ. 27 (DaijiworldNews/TA): 2027ರ ಏಕದಿನ ವಿಶ್ವಕಪ್ಗೆ ಆಫ್ರಿಕ ಖಂಡದ ಮೂರು ರಾಷ್ಟ್ರಗಳು, ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ, ಜಂಟಿಯಾಗಿ ಆತಿಥ್ಯ ವಹಿಸಲಿವೆ. ಈ ಟೂರ್ನಿಯು ಕೇವಲ ವಿಶ್ವ ಕ್ರಿಕೆಟ್ಗೆ ಮಾತ್ರವಲ್ಲ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅಭಿಮಾನಿಗಳಿಗೂ ವಿಶೇಷವಾಗಿರಲಿದೆ.

ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಅಂತ್ಯವಾಗುವ ಸಮಯ ಕುರಿತು ಚರ್ಚೆಗಳು ಈಗಾಗಲೇ ಪ್ರಾರಂಭವಾಗಿದ್ದರೂ, ಇದೀಗ ಆ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಅದು ಹಿಟ್ಮ್ಯಾನ್ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಕಡೆಯಿಂದ ಬಂದಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ರೋಹಿತ್ ಶರ್ಮಾ ಅವರ ನಿವೃತ್ತಿ ಕುರಿತು ವದಂತಿಗಳು ಹರಿದಾಡುತ್ತಿದ್ದವು. ಆದರೆ, ಅದೇ ಸಮಯದಲ್ಲಿ ರೋಹಿತ್ ಶತಕ ಮತ್ತು ಅರ್ಧಶತಕ ಸಿಡಿಸಿ ತಮ್ಮ ಶ್ರೇಷ್ಠ ಫಾರ್ಮ್ನಿಂದ ಆ ಮಾತುಗಳಿಗೆ ತಾತ್ಕಾಲಿಕ ವಿರಾಮ ಹಾಕಿದ್ದರು.
ದಿನೇಶ್ ಲಾಡ್ ಅವರ ಪ್ರಕಾರ, ರೋಹಿತ್ ಶರ್ಮಾ ಇನ್ನೂ ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಲಿದ್ದಾರೆ. ಅವರ ಕನಸು ಭಾರತ ತಂಡದ ನಾಯಕರಾಗಿ ಏಕದಿನ ವಿಶ್ವಕಪ್ ಗೆಲ್ಲುವುದು. ಹೀಗಾಗಿ ಅವರು 2027ರ ವಿಶ್ವಕಪ್ನಲ್ಲಿ ಆಡಲಿದ್ದಾರೆ ಮತ್ತು ಭಾರತ ತಂಡದ ಕೊನೆಯ ಪಂದ್ಯದ ಬಳಿಕ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.
ಇದರಿಂದ, ರೋಹಿತ್ ಶರ್ಮಾ 2027ರವರೆಗೆ ಟೀಮ್ ಇಂಡಿಯಾದ ಪ್ರಮುಖ ಭಾಗವಾಗಿರುವುದು ಖಚಿತವಾಗಿದೆ. ಹೀಗಾಗಿ, 40ನೇ ವಯಸ್ಸಿನಲ್ಲಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದು ತಮ್ಮ ಕ್ರಿಕೆಟ್ ಜೀವನವನ್ನು ಸ್ಮರಣೀಯ ರೀತಿಯಲ್ಲಿ ಅಂತ್ಯಗೊಳಿಸುತ್ತಾರಾ ಎಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.