ಸಿಡ್ನಿ, ಅ. 27 (DaijiworldNews/TA): ಭಾರತ-ಆಸ್ಟ್ರೇಲಿಯಾ ಸರಣಿಯ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಪ್ರಯತ್ನದ ವೇಳೆ ಅಯ್ಯರ್ ತೀವ್ರವಾಗಿ ಗಾಯಗೊಂಡಿದ್ದು, ಇದೀಗ ಅವರನ್ನು ಐಸಿಯುನಲ್ಲಿ ಚಿಕಿತ್ಸೆಗಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ. ಅಯ್ಯರ್ ಅವರ ಎಡ ಪಕ್ಕೆಲುಬಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಇದರಿಂದ ಹೊಟ್ಟೆಯ ಮೇಲ್ಭಾಗದ ಅಂಗಗಳಲ್ಲಿ ಆಂತರಿಕ ರಕ್ತಸ್ರಾವ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆ ಅವರನ್ನು ತಕ್ಷಣವೇ ತೀವ್ರ ನಿಗಾದ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

ಸದ್ಯ ಶ್ರೇಯಸ್ ಅಯ್ಯರ್ ತೀವ್ರ ನಿಗಾದಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ವರದಿಯ ಪ್ರಕಾರ ಅವರು ಇನ್ನೂ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಮುಂದಿನ 48 ಗಂಟೆಗಳೊಳಗೆ ರಕ್ತಸ್ರಾವ ಕಡಿಮೆಯಾಗದಿದ್ದರೆ, ಚಿಕಿತ್ಸೆ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ ಅವರ ಬೃಹತ್ ಶಾಟ್ ಅನ್ನು ತಡೆದ ವೇಳೆ ಈ ಘಟನೆ ನಡೆದಿದೆ. ಹರ್ಷಿತ್ ರಾಣಾ ಅವರ ಎಸೆತವನ್ನು ಕ್ಯಾರಿ ಬಲವಾಗಿ ಹೊಡೆದಾಗ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು. ಆದರೆ ಆ ಕ್ಷಣದಲ್ಲಿ ಅವರ ಎಡ ಪಕ್ಕೆಲುಬು ಭೂಮಿಗೆ ಬಲವಾಗಿ ತಗುಲಿ ಪೆಟ್ಟು ಬಿದ್ದಿದೆ. ನೋವಿನಿಂದ ನರಳುತ್ತಿದ್ದ ಅಯ್ಯರ್ ಅವರನ್ನು ತಕ್ಷಣವೇ ಮೈದಾನದಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶ್ರೇಯಸ್ ಅಯ್ಯರ್ ಅವರ ಗಾಯದ ಸುದ್ದಿ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಟೀಮ್ ಇಂಡಿಯಾ ಸದಸ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಶೀಘ್ರ ಗುಣಮುಖತೆಯ ಹಾರೈಕೆ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾ ಸರಣಿಯ ವೇಳೆ ತೀವ್ರ ಪೆಟ್ಟು ಬಿದ್ದ ಶ್ರೇಯಸ್ ಅಯ್ಯರ್ ಈಗ ಸಿಡ್ನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಮುಂದಿನ 48 ಗಂಟೆಗಳು ನಿರ್ಣಾಯಕವಾಗಲಿವೆ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಅಯ್ಯರ್ ಬೇಗನೆ ಮೈದಾನಕ್ಕಿಳಿಯಲೆಂದು ಆಶಿಸುತ್ತಿದ್ದಾರೆ.