ಲಂಡನ್, ಜು 05 (Daijiworld News/SM): 2016ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಅಂತಿಮ ಲೀಗ್ ಪಂದ್ಯವನ್ನು ಗೆದ್ದುಕೊಂಡಿದ್ದು, ನಿರಾಸೆಯಿಂದಲೇ ತಾಯ್ನಾಡಿನತ್ತ ಹೆಜ್ಜೆ ಇರಿಸಿದೆ. ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 94 ರನ್ ಗಳ ಅಂತರದಿಂದ ಗೆದ್ದುಕೊಂಡಿದ್ದರೂ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.
ಆ ಮೂಲಕ ನ್ಯಾಜಿಲ್ಯಾಂಡ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಡುವುದು ಖಚಿತಗೊಂಡಿದೆ. ರನ್ ರೇಟ್ ಕೊರತೆಯಿಂದಾಗಿ ಪಾಕ್ ವಿಶ್ವಕಪ್ ನಿಂದ ಔಟ್ ಆಗಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬೃಹತ್ ರನ್ ಗಳ ಅಂತರದಿಂದ ಪಾಕಿಸ್ತಾನ ಪಂದ್ಯವನ್ನು ಗೆದ್ದುಕೊಂಡಿದ್ದರೆ, ಸೆಮಿಫೈನಲ್ ಹಾದಿ ತುಳಿಯುತ್ತಿತ್ತು. ಆದರೆ ಅದು ಸಾಧ್ಯವಾಗಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 315 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಆದರೆ, ಸೆಮಿಫೈನಲ್ಸ್ ಅರ್ಹತೆ ಪಡೆಯಲು ಪಾಕಿಸ್ತಾನ ಕನಿಷ್ಠ 450ಕ್ಕೂ ಅಧಿಕ ರನ್ ಗಳಿಸಿ ಬಾಂಗ್ಲಾ ತಂಡವನ್ನು 100ರ ಒಳಗೆ ಆಲ್ಔಟ್ ಮಾಡಬೇಕಿತ್ತು. ಆದರೆ ಇದು ಸಾಧ್ಯವಾಗಿಲ್ಲ.
ಪಾಕ್ ನೀಡಿದ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಶಾಕಿಬ್ ಅಲ್ ಹಸನ್ (64) ಅವರ ಹೋರಾಟದ ಹೊರತಾಗಿಯೂ 44.1 ಓವರ್ಗಳಲ್ಲಿ 221 ರನ್ಗಳಿಗೆ ಸರ್ವ ಪತನಗೊಂಡಿತು. ಪಂದ್ಯದಲ್ಲಿ ಪಾಕಿಸ್ತಾನ ಪರ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಯುವ ವೇಗಿ ಶಹೀನ್ ಶಾ ಅಫ್ರಿದಿ 9.1 ಓವರ್ಗಳಲ್ಲಿ 6 ವಿಕೆಟ್ ಪಡೆದು ಮಿಂಚಿದರು. ಅಲ್ಲದೆ ವಿಶ್ವಕಪ್ ಇತಿಹಾಸದಲ್ಲಿ ಇನಿಂಗ್ಸ್ ಒಂದರಲ್ಲಿ 5ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದ ಅತ್ಯಂತ ಕಿರಿಯ ವಯಸ್ಸಿನ ಬೌಲರ್ ಎಂಬ ದಾಖಲೆಯನ್ನೂ ಬರೆದರು.
ಇನ್ನು ಪಾಕಿಸ್ತಾನ ತಂಡದ ಪರ ಇಮಾಮ್ ಉಲ್ ಹಕ್ (100) ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದರು. ಇನ್ಫಾರ್ಮ್ ಬ್ಯಾಟ್ಸ್ಮನ್ ಬಾಬರ್ ಆಝಮ್ (96) ನಾಲ್ಕು ರನ್ಗಳ ಅಂತರದಲ್ಲಿ ಶತಕ ವಂಚಿತರಾದರು.
ಅಂತಿಮವಾಗಿ ಪಾಕಿಸ್ತಾನ ಪಂದ್ಯವನ್ನು ಗೆದ್ದುಕೊಂಡರೂ ಕೂಡ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದು ನಿರಾಸೆ ಅನುಭವಿಸಿತು. ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿ ಹೊಂದಿದ್ದ ಪಾಕಿಸ್ತಾನ ನಿರಾಸೆಯಿಂದ ತವರಿಗೆ ಹೆಜ್ಜೆ ಇರಿಸಿದೆ.