ಮ್ಯಾಂಚೆಸ್ಟರ್, ಜು 10 (DaijiworldNews/SM): ಭಾರೀ ನಿರೀಕ್ಷೆಯ ಭಾರತ-ನ್ಯೂಜಿಲ್ಯಾಂಡ್ ನಡುವಿನ ಮೊದಲ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಅರ್ಧದಲ್ಲಿ ಮಳೆ ಅಡ್ಡಿ ಪಡಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ ಸಾಧಾರಣಗತಿಯಲ್ಲಿ ಬ್ಯಾಟಿಂಗ್ ನಡೆಸುತ್ತಿತ್ತು. ನ್ಯೂಜಿಲ್ಯಾಂಡ್ ನ ಮೊದಲಾರ್ಧ ಮುಗಿಯಲು ಇನ್ನೇನು ನಾಲ್ಕು ಓವರ್ ಗಳಷ್ಟೇ ಉಳಿದಿದ್ದವು. ಈ ಸಂದರ್ಭ ಮಳೆ ಸುರಿದ ಪರಿಣಾಮ ಪಂದ್ಯ ಅರ್ಧದಲ್ಲೇ ಮೊಟಕುಗೊಂಡು ಎಷ್ಟೇ ಕಾದರೂ ಪಂದ್ಯ ಮತ್ತೆ ಆರಂಭಗೊಂಡಿಲ್ಲ. ಈ ಹಿನ್ನೆಲೆ ಬುಧವಾರದಂದು ಪಂದ್ಯ ಮುಂದುವರೆಸಲು ನಿರ್ಧರಿಸಲಾಗಿದೆ.
46.1 ಓವರ್ಗಳ ಆಟವಾಡಿದ ವೇಳೆ ಸುರಿದ ಮಳೆ ಪಂದ್ಯವನ್ನು ಸ್ಥಗಿತಗೊಳಿಸಿದೆ. ಆಗ ವಿಲಿಯಮ್ಸನ್ ಪಡೆ 5 ವಿಕೆಟಿಗೆ 211 ರನ್ ಮಾಡಿತ್ತು. ಪಂದ್ಯ ಇದೇ ಹಂತದಿಂದ ಬುಧವಾರ ಮುಂದುವರಿಯಲಿದೆ. ಇನ್ನು ಗಮನಾರ್ಹ ಸಂಗತಿಯೆಂದರೆ, ಈ ಬಾರಿಯ ವಿಶ್ವ ಸಮರದಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಲೀಗ್ ಪಂದ್ಯಕ್ಕೂ ಕೂಡ ಮಳೆರಾಯ ಆಡ್ಡಿಯನ್ನುಟ್ಟು ಮಾಡಿದ್ದ. ಪರಿಣಾಮ ಪಂದ್ಯ ರದ್ದಾಗಿತ್ತು. ಇದೀಗ ಮತ್ತೆ ಸೆಮೀಸ್ ನಲ್ಲಿ ಈ ತಂಡಗಳು ಎದುರಾಗಿದ್ದು, ಇಲ್ಲೂ ಕೂಡ ಮಳೆ ಅಡ್ಡಿ ಪಡಿಸಿದೆ.
ಇನ್ನು ಇದಕ್ಕೂ ಮುನ್ನ ಕಿವಿಸ್ ತಂಡದ ಆಪತ್ಬಾಂಧವರೇ ಆಗಿರುವ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದಾಗಿ ನ್ಯೂಜಿಲ್ಯಾಂಡ್ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇಬ್ಬರು ತಲಾ 67 ರನ್ ಗಳ ಕಾಣಿಕೆ ನೀಡಿದರು. ಇವರಲ್ಲಿ ವಿಲಿಯಮ್ಸನ್ ಔಟಾಗಿದ್ದರೆ,ಟೇಲರ್ ಇಂದು ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
ರನ್ ಗಳಿಕೆಗೆ ಪರದಾಟ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಮುಂದಾದ ಕಿವಿಸ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಡಲಾಗಿತ್ತು. ಹಲವಾರು ಮಂದಿ ಕ್ರಿಕೆಟ್ ಪ್ರೇಮಿಗಳು, ಕೆಲವು ವಿಶ್ಲೇಷಕರು ಕಿವಿಸ್ ಬೃಹತ್ ಮೊತ್ತ ಪೇರಿಸಲಿದೆ ಎಂದು ಹೇಳಿದ್ದರು. ಆದರೆ, ಅದೆಲ್ಲವೂ ಹುಸಿಯಾಗಿದೆ. ಮೊದಲ ೧೦ ಓವರ್ ಗಳಲ್ಲಿ ರನ್ ಗಳಿಸಲು ನ್ಯೂಜಿಲ್ಯಾಂಡ್ ತಂಡ ಪರದಾಡಿತು. ಭಾರತದ ಶಿಸ್ತಿನ ದಾಳಿಯ ಮುಂದೆ ಯಾರೊಬ್ಬರ ಆಟವೂ ನಡೆಯಲಿಲ್ಲ. ಭುವನೇಶ್ವರ್ ಮತ್ತು ಬುಮ್ರಾ ಅವರ ಘಾತಕ ಸ್ಪೆಲ್ಗೆ ತತ್ತರಿಸಿದ ನ್ಯೂಜಿಲ್ಯಾಂಡ್ ರನ್ ಗಳಿಸಲು ಪರದಾಡಿತು. ಇಬ್ಬರೂ ತಮ್ಮ ಮೊದಲ ಓವರ್ ಮೇಡನ್ ಎಸೆದರು.
ಮಾರ್ಟಿನ್ ಗಪ್ಟಿಲ್ 14 ಎಸೆತ ಎದುರಿಸಿ ಬುಮ್ರಾ ಎಸೆದ ಮುಂದಿನ ಓವರಿನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ತಂಡದ ಸ್ಕೋರ್ 3.3 ಓವರ್ಗಳಲ್ಲಿ ಬರೀ ಒಂದು ರನ್ ಆಗಿತ್ತು. ತಂಡದ ಮತ್ತೂಬ್ಬ ಆರಂಭಕಾರ ಹೆನ್ರಿ ನಿಕೋಲ್ಸ್ ಕೂಡ ರನ್ನಿಗಾಗಿ ಪರದಾಡಿದರು. 19ನೇ ಓವರ್ ತನಕ ಕ್ರೀಸಿನಲ್ಲಿದ್ದ ಅವರು 51 ಎಸೆತಗಳಿಂದ 28 ರನ್ ಪೇರಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಮೊದಲ 10 ಓವರ್ಗಳಲ್ಲಿ ನ್ಯೂಜಿಲ್ಯಾಂಡ್ ಗಳಿಸಿದ್ದು ಒಂದು ವಿಕೆಟಿಗೆ 27 ರನ್ ಮಾತ್ರ. 40 ಓವರ್ನಲ್ಲಿ ನ್ಯೂಜಿಲ್ಯಾಂಡಿಗೆ ಭಾರಿಸಿದ್ದು ಕೇವಲ 10 ಬೌಂಡರಿಗಳು ಮಾತ್ರ.
ಕೆಲವು ಆಕರ್ಷಕ ಸ್ವೀಪ್ ಶಾಟ್ಗಳ ಮೂಲಕ ಗಮನ ಸೆಳೆದ ವಿಲಿಯಮ್ಸನ್ 79 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದರು. ಒಟ್ಟು 95 ಎಸೆತ ಎದುರಿಸಿ 67 ರನ್ ಗಳಿಸಿದರು. ಆದರೆ ಚಹಲ್ ಎಸೆತವನ್ನು ಉತ್ತಮವಾಗಿ ನಿಭಾಯಿಸಲಾಗದೆ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ರಾಸ್ ಟೇಲರ್ ತಂಡಕ್ಕೆ ನೆರವಾದರು. 85 ಎಸೆತಗಳಿಂದ ಅಜೇಯ 67 ರನ್ ಗಳಿಸಿದರು.
ಈ ನಡುವೆ ನೀಶಮ್ ಮತ್ತು ಗ್ರ್ಯಾಂಡ್ಹೋಮ್ ವಿಕೆಟ್ಗಳನ್ನು ಕಿವೀಸ್ ಕಳೆದು ಕೊಂಡಿತು. ಭಾರತದ ಪರ ದಾಳಿಗಿಳಿದ ಎಲ್ಲ ಬೌಲರ್ಗಳೂ ಒಂದೊಂದು ವಿಕೆಟ್ ಪಡೆದುಕೊಂಡರು.
ಇನ್ನು ನಿನ್ನೆ ಅರ್ಧಕ್ಕೆ ಮೊಟಕುಗೊಂಡಿರುವ ಪಂದ್ಯ ಇಂದು ಮುಂದುವರೆಯಲಿದೆ. ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ನ್ಯೂಜಿಲ್ಯಾಂಡ್ ರನ್ ಗಳಿಕೆಗೆ ಪರದಾಡಿದ್ದನ್ನು ಗಮನಿಸಿದಾಗ ಭಾರತೀಯರಿಗೂ ಒಂದಿಷ್ಟು ನಡುಕ ಶುರುವಾಗಿದೆ. ಇಂದು ಪಂದ್ಯ ಮುಂದುವರೆಯಲಿದೆ.