ಕೊಲ್ಕತ್ತಾ, ಡಿ. 13 (DaijiworldNews/AK): ಅರ್ಜೆಂಟೀನಾ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ.


ಗೋಟ್ ಇಂಡಿಯಾ ಟೂರ್ನ ಕಾರ್ಯಕ್ರಮದ ಭಾಗವಾಗಿ ಇಂದು ಮೆಸ್ಸಿ ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ಹೊರಗೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆ ಬಳಿಕ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಯೋನೆಲ್ ಮೆಸ್ಸಿ ಕಾಣಿಸಿಕೊಂಡಿದ್ದರು. ಆದರೆ ಕೇವಲ 10 ನಿಮಿಷಗಳಲ್ಲೇ ಅರ್ಜೆಂಟೀನಾ ಫುಟ್ಬಾಲ್ ತಾರೆ ಮೈದಾನದಿಂದ ತೆರಳಿದ್ದಾರೆ.
ಇತ್ತ ಟಿಕೆಟ್ ಖರೀದಿಸಿ ಮೆಸ್ಸಿಯನ್ನು ವೀಕ್ಷಿಸಲು ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದೆ. ಮೆಸ್ಸಿಯ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಫ್ಯಾನ್ಸ್ ಕ್ರೀಡಾಂಗಣದೊಳಗೆ ಬಾಟಲಿಗಳನ್ನು ಎಸೆಯಲಾರಂಭಿಸಿದರು. ಅಲ್ಲದೆ ಸ್ಥಳದಲ್ಲಿದ್ದ ಬ್ಯಾರಿಕೇಡ್ಗಳನ್ನು ಮುರಿದು, ಮೈದಾನಕ್ಕೆ ನುಗಿದ್ದ ಅಭಿಮಾನಿಗಳು ದಾಂಧಲೆ ಮಾಡಿದ್ದಾರೆ.
ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇದೀಗ ಪೊಲೀಸರು ಸ್ಟೇಡಿಯಂನಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುತ್ತಿದ್ದಾರೆ.