ಬೆಂಗಳೂರು, ಡಿ. 14 (DaijiworldNews/TA): ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಬಹುಕಾಲದ ನಿರೀಕ್ಷೆಯ ಬಳಿಕ ಸಿಹಿ ಸುದ್ದಿ ಲಭಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಾಲಿ ಚಾಂಪಿಯನ್ ಆರ್ಸಿಬಿ ತಂಡದ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಕೆಎಸ್ಸಿಎ ನೂತನ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ನೇತೃತ್ವದ ಸಮಿತಿಯು, ಆರ್ಸಿಬಿ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿಯನ್ನು ಪರಿಗಣಿಸಿರುವ ಸರ್ಕಾರ, ಚಿನ್ನಸ್ವಾಮಿ ಸ್ಟೇಡಿಯಂ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್–19 ಆರಂಭಕ್ಕೆ ಇನ್ನೂ ಕೆಲ ತಿಂಗಳುಗಳು ಮಾತ್ರ ಬಾಕಿಯಿದ್ದು, ಅದಕ್ಕೂ ಮುನ್ನವೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪುನರಾರಂಭವಾಗುತ್ತಿರುವುದು ಆರ್ಸಿಬಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆರ್ಸಿಬಿ ಮೂಲಗಳ ಪ್ರಕಾರ, ಮಾರ್ಚ್ನಿಂದ ಆರಂಭಗೊಳ್ಳಲಿರುವ ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ.
ಜೂನ್ 4ರಂದು ಆರ್ಸಿಬಿ ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ತನಿಖೆಯ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಭದ್ರತೆ, ನಿರ್ವಹಣೆ ಮತ್ತು ಸುರಕ್ಷತಾ ಲೋಪದೋಷಗಳು ಬಹಿರಂಗವಾಗಿದ್ದವು. ಇದರ ಬೆನ್ನಲ್ಲೇ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಆಯೋಗವು ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ನೀಡಿತ್ತು.
ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್ಸಿಎ ಸಮಿತಿಯು, ಸರ್ಕಾರ ಹಾಗೂ ಆಯೋಗ ನೀಡಿದ ಎಲ್ಲಾ ಶಿಫಾರಸುಗಳನ್ನು ಪಾಲಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದೆ. ಇದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಪಂದ್ಯ ಆಯೋಜನೆಗೆ ಅನುಮತಿ ನೀಡಿದೆ.
ಈಗಾಗಲೇ ವಿಜಯ ಹಝಾರೆ ಟ್ರೋಫಿಯ ಕೆಲವು ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸುವ ಬಗ್ಗೆ ಕೆಎಸ್ಸಿಎ ಉತ್ಸಾಹ ತೋರಿದ್ದು, ಇದರೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಮತ್ತೆ ಬೆಂಗಳೂರಿಗೆ ಮರಳಲು ವೇದಿಕೆ ಸಿದ್ಧವಾಗಿದೆ. ಈ ಎಲ್ಲ ಬೆಳವಣಿಗೆಗಳೊಂದಿಗೆ, ಮುಂಬರುವ ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದು ಈಗ ಬಹುತೇಕ ಖಚಿತವಾಗಿದೆ.