ಮುಂಬೈ, 20 (DaijiworldNews/TA): ಅಹಮದಾಬಾದ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇನ್ನಿಂಗ್ಸ್ ಆರಂಭದಲ್ಲೇ ಸಿಡಿಲಬ್ಬರದ ಸಿಕ್ಸ್ಗಳ ಮೂಲಕ ಗಮನ ಸೆಳೆದ ಪಾಂಡ್ಯ, ಒಂದು ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಗೆ ಕಾರಣರಾದರು.

ಕಾರ್ಬಿನ್ ಬಾಷ್ ಎಸೆದ 13ನೇ ಓವರ್ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಮಿಡ್ ಆಫ್ ದಿಕ್ಕಿನಲ್ಲಿ ಬಾರಿಸಿದ ಫ್ಲಾಟ್ ಸಿಕ್ಸ್ ನೇರವಾಗಿ ಬೌಂಡರಿ ಬಳಿ ನಿಂತಿದ್ದ ಕ್ಯಾಮೆರಾಮ್ಯಾನ್ ಅವರ ಕೈಗೆ ಬಿದ್ದಿತು. ಪರಿಣಾಮ ಕ್ಯಾಮೆರಾಮ್ಯಾನ್ಗೆ ಸಣ್ಣ ಗಾಯವಾಗಿದ್ದು, ತಕ್ಷಣವೇ ಟೀಮ್ ಇಂಡಿಯಾದ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಪಂದ್ಯ ಮುಗಿದ ಬಳಿಕ ಮಾನವೀಯತೆ ಮೆರೆದ ಹಾರ್ದಿಕ್ ಪಾಂಡ್ಯ, ಕ್ಯಾಮೆರಾಮ್ಯಾನ್ ಅವರ ಬಳಿ ತೆರಳಿ ಅವರನ್ನು ತಬ್ಬಿಕೊಂಡು ಕ್ಷಮೆಯಾಚಿಸಿದರು. ಪಾಂಡ್ಯ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 25 ಎಸೆತಗಳನ್ನು ಎದುರಿಸಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 63 ರನ್ ಗಳಿಸಿದರು. ಅವರ ಆಕರ್ಷಕ ಇನ್ನಿಂಗ್ಸ್ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿತು. ಈ ದೊಡ್ಡ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 20 ಓವರ್ಗಳಲ್ಲಿ 201 ರನ್ ಗಳಿಸಿ, 30 ರನ್ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಪಂದ್ಯದಲ್ಲಿ ಪಾಂಡ್ಯ ಅವರ ಬ್ಯಾಟಿಂಗ್ ಜೊತೆಗೆ ಅವರ ಕ್ರೀಡಾ ಮನೋಭಾವವೂ ಅಭಿಮಾನಿಗಳ ಹೃದಯ ಗೆದ್ದಿದೆ.