ನವದೆಹಲಿ, ಡಿ. 26 (DaijiworldNews/AK):14 ವರ್ಷ ವಯಸ್ಸಿನಲ್ಲೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ ತಮ್ಮ ವೃತ್ತಿಜೀವನದ ಆರಂಭದ ಹಂತದಲ್ಲೇ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಐಪಿಎಲ್ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಕಿರಿಯನೆಂಬ ದಾಖಲೆಯಿಂದ ಹಿಡಿದು, ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲೂ ವೈಭವ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸಿಕ್ಕ ಅವಕಾಶಗಳನ್ನು ಉತ್ತಮ ಸಾಧನೆ ಮಾಡಿ ವೈಭವ್ಗೆ ಇದೀಗ ಭಾರತ ಸರ್ಕಾರದಿಂದಲೂ ಮನ್ನಣೆ ಸಿಕ್ಕಿದೆ.
ವೈಭವ್ ಸೂರ್ಯವಂಶಿ ಅವರಿಗೆ ದೇಶದ ಅತ್ಯುನ್ನತ ಮಕ್ಕಳ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಿದ್ದಾರೆ.
ಬಿಹಾರದ ಸಮಷ್ಟಿಪುರದ ವೈಭವ್ ಅವರಿಗೆ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಐಪಿಎಲ್ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಮತ್ತು ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಸಾಧನೆಗಾಗಿ ರಾಷ್ಟ್ರಪತಿ ಮುರ್ಮು ವೈಭವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.