ಬೆಂಗಳೂರು, ಡಿ. 27 (DaijiworldNews/TA): ಭಾರತ ಏಕದಿನ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಸುಮಾರು 60 ದಿನಗಳ ಬಳಿಕ ಮತ್ತೆ ಮೈದಾನಕ್ಕೆ ಮರಳಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಅಯ್ಯರ್ ಇದೀಗ ಬೆಂಗಳೂರಿನ ಸಿಒಇ ಮೈದಾನದಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಅಕ್ಟೋಬರ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಂಪೂರ್ಣ ವಿಶ್ರಾಂತಿ ಹಾಗೂ ಚಿಕಿತ್ಸೆಯ ಬಳಿಕ ಇದೀಗ ಅವರು ಮತ್ತೆ ಬ್ಯಾಟ್ ಹಿಡಿದು ಅಭ್ಯಾಸ ಆರಂಭಿಸಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದಿದೆ. ಎರಡು ತಿಂಗಳ ವಿರಾಮದ ನಂತರ ನೆಟ್ಸ್ನಲ್ಲಿ ಬೆವರಿಳಿಸಿರುವ ಅಯ್ಯರ್, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಅವರನ್ನು ವಿಜಯ ಹಝಾರೆ ಟ್ರೋಫಿಯಲ್ಲಿ ಆಡಿಸಲು ತಂಡದ ನಿರ್ವಹಣಾ ಸಮಿತಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಈಗಿನಿಂದಲೇ ಅಭ್ಯಾಸಕ್ಕೆ ಒತ್ತು ನೀಡಿದ್ದಾರೆ.
ಅಕ್ಟೋಬರ್ 25ರಂದು ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಯ್ಯರ್ ಗಾಯಗೊಂಡಿದ್ದರು. ಹರ್ಷಿತ್ ರಾಣಾ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಹೊಡೆದ ಭರ್ಜರಿ ಶಾಟ್ಗೆ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು. ಈ ವೇಳೆ ಅವರ ಎಡ ಪಕ್ಕೆಲುಬಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಗುಲ್ಮ ಭಾಗದಲ್ಲಿ ಆಂತರಿಕ ರಕ್ತಸ್ರಾವ ಉಂಟಾಗಿತ್ತು. ಸ್ಕ್ಯಾನಿಂಗ್ ವರದಿಯಲ್ಲಿ ಗುಲ್ಮ ಭಾಗ ಛಿದ್ರಗೊಂಡಿರುವುದು ಪತ್ತೆಯಾಗಿದ್ದು, ಅವರನ್ನು ಇಂಟರ್ವೆನ್ಷನಲ್ ಟ್ರಾನ್ಸ್-ಕ್ಯಾತಿಟರ್ ಎಂಬೋಲೈಸೇಶನ್ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಚಿಕಿತ್ಸೆ ಮತ್ತು ವಿಶ್ರಾಂತಿಯ ಬಳಿಕ ಶ್ರೇಯಸ್ ಅಯ್ಯರ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಮತ್ತೆ ಆಟಕ್ಕೆ ಮರಳಲು ಸಿದ್ಧರಾಗಿದ್ದಾರೆ.