ನವದೆಹಲಿ, ಡಿ. 28 (DaijiworldNews/TA): ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಎಂಐ ಎಮಿರೇಟ್ಸ್ ನಾಯಕ ಕೀರನ್ ಪೊಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಒಂದೇ ಓವರ್ನಲ್ಲಿ 30 ರನ್ ಚಚ್ಚುವ ಮೂಲಕ ಅವರು ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದುಬೈ ಕ್ಯಾಪಿಟಲ್ಸ್ ಮತ್ತು ಎಂಐ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದುಬೈ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 122 ರನ್ಗಳಿಗೆ ಸೀಮಿತವಾಯಿತು. 123 ರನ್ಗಳ ಸುಲಭ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡ 59 ರನ್ಗೆ 2 ವಿಕೆಟ್ ಕಳೆದುಕೊಂಡ ಹಂತದಲ್ಲಿ ನಾಯಕ ಕೀರನ್ ಪೊಲಾರ್ಡ್ ಕಣಕ್ಕಿಳಿದರು. ಆರಂಭದಲ್ಲಿ ಎಚ್ಚರಿಕೆಯಿಂದ ಆಟ ಆರಂಭಿಸಿದ ಪೊಲಾರ್ಡ್, ನಂತರ ದಾಳಿ ಶುರುಮಾಡಿದರು.
ವಕಾರ್ ಸಲಾಂಖೈಲ್ ಎಸೆದ 15ನೇ ಓವರ್ನಲ್ಲಿ ಪೊಲಾರ್ಡ್ 6, 4, 2, 6, 6, 6 ಸಿಡಿಸಿ ಬರೋಬ್ಬರಿ 30 ರನ್ ಚಚ್ಚಿದರು. ಈ ಆರ್ಭಟದೊಂದಿಗೆ ಎಂಐ ಎಮಿರೇಟ್ಸ್ ತಂಡವು 16.4 ಓವರ್ಗಳಲ್ಲಿ ಗುರಿ ತಲುಪಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಎಂಐ ಎಮಿರೇಟ್ಸ್ ತಂಡವು ಇಂಟರ್ನ್ಯಾಷನಲ್ ಟಿ20 ಲೀಗ್ ಪ್ಲೇಆಫ್ಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿದೆ. ಜನವರಿ ಮೊದಲ ವಾರದಲ್ಲಿ ನಡೆಯಲಿರುವ ಪ್ಲೇಆಫ್ ಪಂದ್ಯಗಳಲ್ಲಿ ತಂಡ ಕಣಕ್ಕಿಳಿಯಲಿದೆ.