ಮುಂಬೈ, ಜ. 08 (DaijiworldNews/AK): ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳು ನಡೆಯಲಿದೆ. ಈ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ.

ಭಾರತ ಟಿ20 ತಂಡದ ಪ್ರಮುಖ ಆಟಗಾರ ತಿಲಕ್ ವರ್ಮಾ ಗಾಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವಿಜಯ ಹಝಾರೆ ಟೂರ್ನಿಯ ವೇಳೆ ತೊಡೆಸಂಧು ಸಮಸ್ಯೆಗೆ ಒಳಗಾಗಿದ್ದ ತಿಲಕ್ ಆಸ್ಪತ್ರೆಗೆ ದಾಖಲಾಗಿದ್ದು, ನೋವಿನ ಸಮಸ್ಯೆಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ತಿಲಕ್ ವರ್ಮಾ ಇಲ್ಲ. ಇನ್ನು ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರು ಉಳಿದ ಮೂರು ಮ್ಯಾಚ್ಗಳ ವೇಳೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ತಿಲಕ್ ವರ್ಮಾ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರ ಫಿಟ್ನೆಸ್ ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯ. ಹಾಗಾಗಿ ಟಿ20 ವಿಶ್ವಕಪ್ಗೂ ಮುನ್ನ ಬಿಸಿಸಿಐ ವೈದ್ಯಕೀಯ ತಂಡವು ತಿಲಕ್ ವರ್ಮಾ ಅವರನ್ನು ಮೇಲ್ವಿಚಾರಣೆ ಮಾಡಲಿದೆ. ಒಂದು ವೇಳೆ ಅವರು ಫೆಬ್ರವರಿ ಮೊದಲ ವಾರದೊಳಗೆ ಸಂಪೂರ್ಣ ಗುಣಮುಖರಾಗದೇ ಇದ್ದರೆ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.