ಬೆಂಗಳೂರು, ಜ. 09 (DaijiworldNews/TA): ಮತ್ತೆ ಕ್ರಿಕೆಟ್ ವೈಭವವನ್ನ ಜನರೆದುರುತರಲು ಚಿನ್ನಸ್ವಾಮಿ ಸ್ಟೇಡಿಯಂ ಸಿದ್ದವಾಗುತ್ತಿದೆ. ಹಿಂದೆ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ದುರಂತದಿಂದ ಸರ್ಕಾರ ಮತ್ತು ಪೊಲೀಸ್ ಇಲಾಖೆ ತೀವ್ರ ಟೀಕೆಗೆ ಒಳಗಾಗಿದ್ದು, ಸೂಕ್ತ ಭದ್ರತೆ ಒದಗಿಸದ ಹಿನ್ನೆಲೆಯಲ್ಲಿ ಆಗಿನ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಹಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆರ್ಸಿಬಿ ಮ್ಯಾನೇಜ್ಮೆಂಟ್ ಸೇರಿದಂತೆ ಕೆಲವರ ಬಂಧನವೂ ನಡೆದಿತ್ತು.

ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು. ಸಮಿತಿಯ ವರದಿಯಲ್ಲಿ, ಕಾಲ್ತುಳಿತಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದ್ದ ವ್ಯವಸ್ಥಾತ್ಮಕ ಲೋಪಗಳೇ ಪ್ರಮುಖ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಸ್ಟೇಡಿಯಂನಲ್ಲಿ ಒಟ್ಟು 16 ಪ್ರಮುಖತೆಗಳಿದ್ದು, ಅವುಗಳೇ ದುರಂತಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ವರದಿ ತಿಳಿಸಿತ್ತು.
ವರದಿಯ ಪ್ರಕಾರ, ಸ್ಟೇಡಿಯಂನ ಗೇಟ್ಗಳು ಮತ್ತು ಮೆಟ್ಟಿಲುಗಳು ತುಂಬಾ ಚಿಕ್ಕದಾಗಿದ್ದು, ಅಗ್ನಿಶಾಮಕ ವಾಹನಗಳು ಹಾಗೂ ಆ್ಯಂಬುಲೆನ್ಸ್ ಸಂಚರಿಸಲು ಸುತ್ತಮುತ್ತಲೂ ಸೂಕ್ತ ಜಾಗವಿಲ್ಲ. ಜನರು ಮತ್ತು ತಂಡಗಳ ವಾಹನಗಳಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದಲ್ಲದೆ, ಕ್ರೀಡಾಂಗಣದ ಒಳಭಾಗದಲ್ಲಿ ನಿರ್ಮಾಣಗೊಂಡ ಕಟ್ಟಡಗಳಿಗೆ ನಿಯಮಾನುಸಾರ ಸೆಟ್ಬ್ಯಾಕ್ ಬಿಟ್ಟಿಲ್ಲ. ತುರ್ತು ನಿರ್ಗಮನ ವ್ಯವಸ್ಥೆಯ ಕೊರತೆ, ಅವೈಜ್ಞಾನಿಕ ತಡೆಗೋಡೆಗಳು ಹಾಗೂ ಕಾಲ್ತುಳಿತದ ನಂತರವೂ ಯಾವುದೇ ಸುಧಾರಣೆ ಆಗಿಲ್ಲ ಎಂಬುದನ್ನು ಸಮಿತಿ ಗಂಭೀರವಾಗಿ ಉಲ್ಲೇಖಿಸಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಅನುಮತಿ ನಿರಾಕರಿಸುವಂತೆ ಕೂಡ ಶಿಫಾರಸು ಮಾಡಲಾಗಿತ್ತು.
ಈ ವರದಿಯ ನಂತರ ಈಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್ಸಿಎ) ಲೋಪಗಳನ್ನು ಸರಿಪಡಿಸಲು ಮುಂದಾಗಿದೆ. ಆ್ಯಂಬುಲೆನ್ಸ್ ಸಂಚಾರಕ್ಕೆ ಅಗಲವಾದ ಮಾರ್ಗಗಳು, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ, ತುರ್ತು ನಿರ್ಗಮನ ದ್ವಾರಗಳು, ಅಗಲವಾದ ಗೇಟ್ಗಳು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಪ್ರವೇಶ–ನಿರ್ಗಮನ ವ್ಯವಸ್ಥೆ ಸೇರಿದಂತೆ ಎಲ್ಲಾ ಭದ್ರತಾ ಮಾರ್ಗಸೂಚಿಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಸದ್ಯದಲ್ಲೇ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಸುರಕ್ಷಿತ ಹಾಗೂ ಸುಧಾರಿತ ವ್ಯವಸ್ಥೆಗಳೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ಕ್ರಿಕೆಟ್ ಅಭಿಮಾನಿಗಳನ್ನು ಸ್ವಾಗತಿಸಲು ಸಿದ್ಧವಾಗುತ್ತಿದೆ.