ಕೊಲಂಬೊ, ಜು 25 (DaijiworldNews/SM): ಶ್ರೀಲಂಕಾ ತಂಡದ ವೇಗಿ ನುವಾನ್ ಕುಲಶೇಖರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದು ನಿವೃತ್ತಿ ಘೋಷಿಸಿದ್ದಾರೆ.
37 ವರ್ಷದ ಕುಲಶೇಖರ್ ಅವರು ತನ್ನ ಬೌಲಿಂಗ್ ಸಂದರ್ಭದಲ್ಲಿ ಸ್ವಿಂಗ್ ಮಾಡುವಲ್ಲಿ ನಿಸ್ಸೀಮರಾಗಿದ್ದರು. ಇವರು ಶ್ರೀಲಂಕಾ ಪರ ಗರಿಷ್ಠ ವಿಕೆಟ್ ಪಡೆದ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದುವರೆಗೆ ತಾನು ಆಡಿರುವ ಒಟ್ಟು 199 ಪಂದ್ಯಗಳಲ್ಲಿ 184 ವಿಕೆಟ್ ಗಳನ್ನು ಕುಲಶೇಖರ ಪಡೆದುಕೊಂಡಿದ್ದಾರೆ. ಇನ್ನು ಟಿ20 ಪಂದ್ಯಗಳಲ್ಲಿ, ಕುಲಶೇಖರ ಶ್ರೀಲಂಕಾ ತಂಡದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದಾರೆ. ಆಡಿರುವ 58 ಟಿ-20 ಪಂದ್ಯಗಳಲ್ಲಿ 66 ವಿಕೆಟ್ ಗಳನ್ನು ಕಿತ್ತಿದ್ದಾರೆ. ಇನ್ನು ಟೆಸ್ಟ್ ಪಂದ್ಯಗಳಲ್ಲಿ 21 ಪಂದ್ಯಗಳಲ್ಲಿ 48 ವಿಕೆಟ್ ಗಳನ್ನು ಕಬಳಿಸಿದ್ದಾರೆ.
2003ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದ ಮೂಲಕ ಅವರು ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಜಗತ್ತಿಗೆ ಕಾಲಿಟ್ಟಿದ್ದರು. 2017ರಲ್ಲಿ ಆಡಿರುವುದು ಕುಲಶೇಖರ್ ಶ್ರೀಲಂಕಾ ಪರ ಆಡಿದ ಕೊನೆಯ ಪಂದ್ಯವಾಗಿತ್ತು. ಬಳಿಕ ಫಾರ್ಮ್ ಕೊರತೆಯಿಂದ ಕುಲಶೇಖರ್ ತಂಡದಿಂದ ಹೊರಗುಳಿದಿದ್ದಾರೆ.
2011ರ ವಿಶ್ವಕಪ್ ಫೈನಲ್ಸ್ ನಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಅಂತಿಮ ಕ್ಷಣದಲ್ಲಿ ಕುಲಶೇಖರ ಎಸೆದ ಬಾಲ್ ಗೆ ಎಂ.ಎಸ್.ಧೋನಿ ಸಿಕ್ಸರ್ ಬಾರಿಸಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಇಂದಿಗೂ ಮರೆಯಲಾಗದ ನೆನಪಾಗಿ ಉಳಿದಿದೆ.