ಕೊಲಂಬೊ, ಫೆ. 15 (DaijiworldNews/TA): ಆರ್. ಪ್ರೇಮದಾಸವ ಸ್ಟೇಡಿಯಂ ಇಂದು (ಫೆಬ್ರವರಿ 15) ಮಹತ್ವದ ಕ್ರೀಡಾಕ್ಷಣಕ್ಕೆ ಸಾಕ್ಷಿಯಾಗಲಿದೆ. ಟಿ20 ವಿಶ್ವಕಪ್ನ 28ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಎಂದಿನಂತೆ ಈ ಕಾಳಗ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದು, ಈ ಬಾರಿ ಆಟಕ್ಕಿಂತಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಹಸ್ತಲಾಘವದ ಪ್ರಶ್ನೆ.

ಕಳೆದ ವರ್ಷ ಭಾರತದ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರ ದಾಳಿಯ ಹಿನ್ನೆಲೆ, ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡದೇ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ವಿಶೇಷವಾಗಿ ಏಷ್ಯಾಕಪ್ ವೇಳೆ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡದೆ ಕ್ರೀಡಾಂಗಣ ತೊರೆದ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಾರಿ ಅದೇ ನಿಲುವು ಮುಂದುವರಿಯುತ್ತದೆಯೇ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ.
ಫೆಬ್ರವರಿ 14ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಉಭಯ ತಂಡಗಳ ನಾಯಕರನ್ನು ಈ ವಿಚಾರವಾಗಿ ಪ್ರಶ್ನಿಸಲಾಯಿತು. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ “ಇನ್ನೂ 24 ಗಂಟೆ ಕಾಯಿರಿ, ನಿಮಗೇ ತಿಳಿಯುತ್ತದೆ” ಎಂದು ಹೇಳಿ ನೇರ ಉತ್ತರ ನೀಡುವುದನ್ನು ತಪ್ಪಿಸಿದರು. ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘ “ನಾಳೆ ಏನಾಗುತ್ತದೆ ಎಂದು ನೋಡೋಣ” ಎಂದು ಪ್ರತಿಕ್ರಿಯಿಸಿ, ಪಂದ್ಯ ಕ್ರೀಡಾ ಮನೋಭಾವದಲ್ಲಿ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡನ್ನು ಇತ್ತೀಚೆಗೆ ಇಂಟರ್ನ್ಯಾಚನಲ್ ಕ್ರಿಕೆಟ್ ಕೌನ್ಸಿಲ್ ಮನವೊಲಿಸಿತ್ತು ಎನ್ನಲಾಗಿದೆ. ಈ ವೇಳೆ ಪಾಕಿಸ್ತಾನ ಮಂಡಳಿ ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದು, ಹಸ್ತಲಾಘವವನ್ನು ಕಡ್ಡಾಯಗೊಳಿಸುವಂತೆ ಒತ್ತಾಯಿಸಿದೆ ಎಂಬ ವರದಿಗಳು ಕೇಳಿಬಂದಿವೆ. ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು ಎಂಬ ನಿಲುವಿನಡಿ ಈ ಆಗ್ರಹ ಮುಂದಿಡಲಾಗಿದೆ.
ಐಸಿಸಿ ಶಿಷ್ಟಾಚಾರಗಳನ್ನು ಉಲ್ಲಂಘಿಸದಂತೆ ಉಭಯ ತಂಡಗಳಿಗೂ ಸೂಚನೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ ಪರಸ್ಪರ ಹಸ್ತಲಾಘವ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಕ್ರೀಡಾವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಆದರೆ ಅಂತಿಮವಾಗಿ ಮೈದಾನದಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಕ್ರೀಡಾ ಮನೋಭಾವವೇ ಗೆಲ್ಲುತ್ತದೆಯೇ ಅಥವಾ ರಾಜಕೀಯ ನೆರಳು ಮುಂದುವರಿಯುತ್ತದೆಯೇ ಎಂಬುದಕ್ಕೆ ಇಂದಿನ ಪಂದ್ಯವೇ ಉತ್ತರ ನೀಡಲಿದೆ.