ನವದೆಹಲಿ, ಜು 29 (Daijiworld News/SM): 2019ರ ವಿಶ್ವಕಪ್ ನಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಲಿದೆ ಎಂದು ಭಾರತೀಯರು ಸಾಕಷ್ಟು ವಿಶ್ವಾಸ ಹೊಂದಿದ್ದರು. ಆದರೆ, ಆಂತಿಮ ಹಂತದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಟೀಂ ಇಂಡಿಯಾ ವಿಶ್ವ ಗೆಲ್ಲುವ ಅವಕಾಶ ಕೈ ಚೆಲ್ಲಿತ್ತು. ವಿಶ್ವಕಪ್ ಸೋತ ಬಳಿಕವೂ ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಅವರನ್ನು ಮುಂದುವರೆಸಬೇಕೇ? ಬೇಡವೇ? ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ವಿಶ್ವಕಪ್ ನ ಸೆಮಿಫೈನಲ್ಸ್ ನಲ್ಲಿ ಭಾರತ ಸೋತ ನಂತರವೂ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಲ್ಲಿ ಮುಂದುವರೆಸಿರುವುದನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಿರೋಧಿಸಿದ್ದಾರೆ.
ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ನೇಮಕಗೊಂಡಿದ್ದು ವಿಶ್ವಕಪ್ ವರೆಗೆ ಮಾತ್ರ. ಆ ನಂತರ ಅವರನ್ನು ಮುಂದುವರೆಸುವುದರ ಬಗ್ಗೆ ಸಣ್ಣ ಸಭೆ ನಡೆಯಬೇಕಿತ್ತು ಎಂದು ಗವಾಸ್ಕರ್ ತಿಳಿಸಿದ್ದಾರೆ.
ಸಭೆಯನ್ನೇ ಮಾಡದೆ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಲ್ಲಿ ಮುಂದುವರೆಸಿರುವುವ ಆಯ್ಕೆ ಸಮಿತಿ ನಿರ್ಧಾರವನ್ನು ಗಾವಸ್ಕರ್ ಖಂಡಿಸಿದ್ದಾರೆ. ವಿರಾಟ್ ಕೊಹ್ಲಿಯನ್ನು ವೆಸ್ಟ್ ಇಂಡೀಸ್ ವಿರುದ್ಧದ ಎಲ್ಲಾ 3 ವಿಭಾಗಗಳ ಟೂರ್ನಿಗಳಿಗೂ ನಾಯಕನನ್ನಾಗಿ ನೇಮಕ ಮಾಡಿದೆ.