ಚೆನ್ನೈ,ಫೆ. 17 (DaijiworldNews/AK): ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಕೆನಡಾ ತಂಡದ ಆರಂಭಿಕ ಆಟಗಾರ ಯುವರಾಜ್ ಸಾಮ್ರಾ ಭರ್ಜರಿ ಶತಕ ಸಿಡಿಸುವ ಇತಿಹಾಸ ನಿರ್ಮಿಸಿದ್ದಾರೆ.

ಸೂಪರ್ – 8ಗೆ ಲಗ್ಗೆಯಿಡಲು ನ್ಯೂಜಿಲೆಂಡ್ ತಂಡಕ್ಕೆ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕನಾಗಿ ಕಣಕ್ಕಿಳಿದ ಸಾಮ್ರಾ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ್ರೂ ಸ್ಫೋಟಕ ಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 19 ವರ್ಷದ ಸಾಮ್ರಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಬಲಿಷ್ಠ ತಂಡದ ವಿರುದ್ಧ ದಿಟ್ಟ ಬ್ಯಾಟಿಂಗ್ ನಡೆಸಿದ ಸಾಮ್ರಾ 36 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿಯೊಂದಿಗೆ ಅರ್ಧಶತಕ ಬಾರಿಸಿದ್ದರು. ಬಳಿಕ ಸ್ಫೋಟಕ ಪ್ರದರ್ಶನಕ್ಕೆ ಮುಂದಾದ ಅವರು ಮುಂದಿನ 22 ಎಸೆತಗಳಲ್ಲಿ 50 ರನ್ ಬಾರಿಸಿ ಶತಕ ಪೂರೈಸಿದರು. ಒಟ್ಟು 65 ಎಸೆತಗಳನ್ನು ಎದುರಿಸಿದ ಸಾಮ್ರಾ 110 ರನ್ (6 ಸಿಕ್ಸರ್, 11 ಬೌಂಡರಿ) ಹೊಡೆದು ಔಟಾದರು.