ಮುಂಬೈ, ಫೆ. 18 (DaijiworldNews/TA) : ಕೇವಲ 19ನೇ ವಯಸ್ಸಿನಲ್ಲಿ ಶತಕ ಸಿಡಿಸಿ ಕ್ರಿಕೆಟ್ ಲೋಕದ ಗಮನ ಸೆಳೆದ ಯುವರಾಜ್ ಸಮ್ರಾ, ಟ್ವೆಂಟಿ-ಟ್ವೆಂಟಿ ವಿಶ್ವಕಪ್ ವೇದಿಕೆಯಲ್ಲಿ ಅಪೂರ್ವ ಇತಿಹಾಸ ನಿರ್ಮಿಸಿದ್ದಾರೆ. ಅಸೋಸಿಯೇಟ್ ರಾಷ್ಟ್ರದ ಆಟಗಾರನಾಗಿ ಇಷ್ಟು ಕಡಿಮೆ ವಯಸ್ಸಿನಲ್ಲಿ ಶತಕ ಬಾರಿಸಿರುವುದು ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ವಿಶೇಷ ಸಾಧನೆಯಾಗಿದೆ. ಶತಕದೊಂದಿಗೆ ಯುವ ದಾಂಡಿಗ 4 ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪುರುಷರ ಐಸಿಸಿ ಪುರುಷರ ಟ್ವೆಂಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಗೌರವ ಇದೀಗ ಯುವರಾಜ್ ಸಮ್ರಾ ಪಾಲಾಗಿದೆ. ಇದಕ್ಕೂ ಮೊದಲು ಈ ದಾಖಲೆ ಪಾಕಿಸ್ತಾನದ ಅಹಮದ್ ಶೆಹಝಾದ್ ಅವರ ಹೆಸರಿನಲ್ಲಿತ್ತು. ಅವರು 22ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ 19ರ ಹರೆಯದಲ್ಲೇ ಶತಕ ಸಿಡಿಸುವ ಮೂಲಕ ಸಮ್ರಾ ಹೊಸ ಇತಿಹಾಸ ಬರೆದಿದ್ದಾರೆ.
ಇದರೊಂದಿಗೆ ಕೆನಡಾ ಪರ ಆಡುತ್ತಿರುವ ಸಮ್ರಾ, ಟ್ವೆಂಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಶತಕ ಬಾರಿಸಿದ ಅಸೋಸಿಯೇಟ್ ರಾಷ್ಟ್ರದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಐಸಿಸಿ ಪೂರ್ಣ ಸದಸ್ಯರಲ್ಲದ ರಾಷ್ಟ್ರದ ಆಟಗಾರನಿಂದ ಈ ಸಾಧನೆ ನಡೆದಿರುವುದು ಕ್ರಿಕೆಟ್ ಇತಿಹಾಸದಲ್ಲೇ ಅಪೂರ್ವ ಘಟನೆಯಾಗಿದೆ.
ಅಷ್ಟೇ ಅಲ್ಲದೆ, ಏಕದಿನ ಅಥವಾ ಟ್ವೆಂಟಿ-ಟ್ವೆಂಟಿ ಮಾದರಿಯಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ವಿಶ್ವದಾಖಲೆಯೂ ಯುವರಾಜ್ ಸಮ್ರಾ ಹೆಸರಿಗೆ ಸೇರ್ಪಡೆಯಾಗಿದೆ. 19ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ಅವರು ತಮ್ಮ ಪ್ರತಿಭೆಯನ್ನು ವಿಶ್ವದ ಮುಂದೆ ಸಾಬೀತುಪಡಿಸಿದ್ದಾರೆ.
ನ್ಯೂಜಿಲೆಂಡ್ವಿರುದ್ಧ ನಡೆದ ಪಂದ್ಯದಲ್ಲಿ ಅವರು 65ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ 110 ರನ್ ಸಿಡಿಸಿದರು. ಈ ಮೊತ್ತವು ಕೆನಡಾ ಪರ ವಿಶ್ವಕಪ್ ಇತಿಹಾಸದಲ್ಲೇ ದಾಖಲಾದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. ಯುವರಾಜ್ ಸಮ್ರಾ ಅವರ ಈ ಸ್ಫೋಟಕ ಇನ್ನಿಂಗ್ಸ್ ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಅಸೋಸಿಯೇಟ್ ರಾಷ್ಟ್ರಗಳಿಗೂ ವಿಶ್ವ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಸಾಧ್ಯವೆಂಬ ಸಂದೇಶ ನೀಡಿದೆ.