ಬೆಂಗಳೂರು, ಫೆ. 21 (DaijiworldNews/TA): ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ರಾಹುಲ್ ಚಾಹರ್ ತಮ್ಮ ಪತ್ನಿ ಇಶಾನಿ ಜೋಹರ್ ಅವರೊಂದಿಗೆ ವಿಚ್ಛೇದನ ಪಡೆದಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ. ಈ ಮೂಲಕ ಮೂರು ವರ್ಷದ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ್ದಾರೆ.

2022ರ ಮಾರ್ಚ್ 9ರಂದು ಗೋವಾದಲ್ಲಿ ಇಶಾನಿ ಜೋಹರ್ ಅವರೊಂದಿಗೆ ರಾಹುಲ್ ಚಾಹರ್ ಮದುವೆಯಾಗಿದ್ದರು. ಅಂದಾಗ ಅವರು ಕೇವಲ 22ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನವೇ ವಿಚ್ಛೇದನ ಘೋಷಿಸಿರುವುದು ಗಮನಾರ್ಹವಾಗಿದೆ. 2021ರಲ್ಲಿ ಭಾರತ ತಂಡದ ಪರ ಕೊನೆಯ ಬಾರಿ ಅವರು ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ ರಾಹುಲ್ ಚಾಹರ್, “ನನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲು, ನನ್ನ ಮೌಲ್ಯವನ್ನು ಅರಿಯುವ ಮೊದಲು ಮತ್ತು ನಾನು ಬಯಸಿದ ಜೀವನದ ದಿಕ್ಕು ತಿಳಿಯುವ ಮೊದಲೇ, ಅಂದರೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾದೆ,” ಎಂದು ತಿಳಿಸಿದ್ದಾರೆ.
“ನಾನು ನಿರೀಕ್ಷಿಸದ ಅನೇಕ ಪಾಠಗಳನ್ನು ಜೀವನದಲ್ಲಿ ಕಲಿತೆ. ಕಳೆದ ಹದಿನೈದು ತಿಂಗಳು ನ್ಯಾಯಾಲಯದ ಕೋಣೆಗಳಲ್ಲಿ ಕಳೆದವು. ಅಲ್ಲಿ ಸಹನೆ, ದೃಢತೆ ಮತ್ತು ಸತ್ಯದ ಶಕ್ತಿಯನ್ನು ಅರಿತುಕೊಂಡೆ. ಇದೀಗ ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದ್ದು, ನನ್ನ ಜೀವನದ ಆ ಅಧ್ಯಾಯ ಅಧಿಕೃತವಾಗಿ ಮುಕ್ತಾಯಗೊಂಡಿದೆ,” ಎಂದು ಅವರು ಬರೆದಿದ್ದಾರೆ.
“ಈ ಅಧ್ಯಾಯವನ್ನು ಕೋಪದಿಂದ ಅಥವಾ ಪಶ್ಚಾತ್ತಾಪದಿಂದ ಮುಗಿಸುವುದಿಲ್ಲ. ಸ್ಪಷ್ಟತೆಯೊಂದಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ಕೆಲವು ಸಂಬಂಧಗಳು ಸದಾಕಾಲ ಇರಲು ಬರುವುದಿಲ್ಲ; ಅವು ನಮಗೆ ಪಾಠ ಕಲಿಸಲು ಬರುತ್ತವೆ,” ಎಂದು ಹೇಳಿದ್ದಾರೆ.
“ಇದು ಅಂತ್ಯವಲ್ಲ, ಹೊಸ ಆರಂಭ. ಇಂದಿನಿಂದ ನನ್ನ ಪ್ರತಿಯೊಂದು ನಿರ್ಧಾರವೂ ಸ್ವಾಭಿಮಾನ, ಶಾಂತಿ ಮತ್ತು ಉತ್ತಮ ಆಯ್ಕೆಗಳ ಮೇಲೆ ನಿಂತಿರುತ್ತದೆ. ನಾನು ಮುಂದಕ್ಕೆ ತೆಗೆದುಕೊಂಡು ಹೋಗುವುದು ಕೋಪವಲ್ಲ, ಪಾಠ, ಗೌರವ ಮತ್ತು ಧೈರ್ಯ,” ಎಂದು ರಾಹುಲ್ ಚಾಹರ್ ತಮ್ಮ ವಿಚ್ಛೇದನ ವಿಚಾರವನ್ನು ಹಂಚಿಕೊಂಡಿದ್ದಾರೆ.