ನವದೆಹಲಿ, ಫೆ. 23 (DaijiworldNews/TA): ಟಿ20 ವಿಶ್ವಕಪ್ನ 43ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ವಾಷಿಂಗ್ಟನ್ ಸುಂದರ್ ಹಾಗೂ ದಕ್ಷಿಣ ಆಫ್ರಿಕಾ ದಾಂಡಿಗ ಡೇವಿಡ್ ಮಿಲ್ಲರ್ ನಡುವೆ ಮಾತಿನ ಚಕಮಕಿ ನಡೆದಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ–ಸೌತ್ ಆಫ್ರಿಕಾ ಪಂದ್ಯದಲ್ಲಿ ಈ ಘಟನೆ ನಡೆಯಿತು.

ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 14ನೇ ಓವರ್ ಎಸೆದ ಸುಂದರ್, ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಮಿಲ್ಲರ್ ಚೆಂಡು ಎಸೆಯುವ ಮುನ್ನವೇ ಕ್ರೀಸ್ ಬಿಟ್ಟು ಮುಂದೆ ಬರುತ್ತಿರುವುದನ್ನು ಗಮನಿಸಿದರು. ಈ ಬಗ್ಗೆ ಅವರು ತಕ್ಷಣ ಫೀಲ್ಡ್ ಅಂಪೈರ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಓವರ್ ಮುಗಿದ ಬಳಿಕ ಮಿಲ್ಲರ್ ಈ ವಿಚಾರವಾಗಿ ಸುಂದರ್ ಜೊತೆ ವಾಗ್ವಾದಕ್ಕಿಳಿದರು. ಪರಿಸ್ಥಿತಿ ಉದ್ವಿಗ್ನಗೊಂಡಂತಾಗುತ್ತಿದ್ದಂತೆ ಫೀಲ್ಡ್ ಅಂಪೈರ್ ಕ್ರಿಸ್ ಗಾಫೆನಿ, ಟೀಮ್ ಇಂಡಿಯಾ ವಿಕೆಟ್ ಕೀಪರ್ ಇಶಾನ್ ಕಿಶನ್ ಹಾಗೂ ದಕ್ಷಿಣ ಆಫ್ರಿಕಾ ಆಟಗಾರ ಟ್ರಿಸ್ಟನ್ ಸ್ಟಬ್ಸ್ ಮಧ್ಯ ಪ್ರವೇಶಿಸಿ ವಾತಾವರಣ ಶಾಂತಗೊಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 18.5 ಓವರ್ಗಳಲ್ಲಿ 111 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ 76 ರನ್ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದಲ್ಲಿ ಉಂಟಾದ ಈ ಚಕಮಕಿ ಕ್ಷಣಿಕ ಉದ್ವಿಗ್ನತೆಯನ್ನು ಸೃಷ್ಟಿಸಿದರೂ, ಆಟ ಮುಂದುವರಿದಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.