ಶ್ರೀನಗರ, ಆ 03 (Daijiworld News/SM): ಪ್ರಾದೇಶಿಕ ಸೇನಾಪಡೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಆಗಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಉಗ್ರರ ಅಟ್ಟಹಾಸ ಅಧಿಕವಿರುವ ಪ್ರದೇಶದಲ್ಲೇ ಗಸ್ತು ತಿರುಗುವ ಕಾರ್ಯದಲ್ಲಿದ್ದಾರೆ.
ಸೇನಾ ಪಡೆಗಳೊಂದಿಗೆ ಕರ್ತವ್ಯದಲ್ಲಿರುವ ಧೋನಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ತನಕ 106 ಟಿಎ ಬಟಾಲಿಯನ್ನಲ್ಲಿ ಉಳಿದುಕೊಳ್ಳಲಿದ್ದಾರೆ.
'ಲೆಫ್ಟಿನೆಂಟ್ ಕರ್ನಲ್ ಧೋನಿ ಅವರು ಬುಧವಾರದಂದು, ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಕ್ಟರ್ ಫೋರ್ಸ್ನ ಭಾಗವಾಗಿ ಉಗ್ರರ ಚಟುವಟಿಕೆ ತೀವ್ರವಾಗಿರುವ ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಈ ತಂಡವನ್ನು ನಿಯೋಜಿಸಲಾಗಿದೆ.
ದೇಶ ಸೇವೆಯ ಇಂಗಿತ ಹೊಂದಿದ್ದ ಧೋನಿ, ಉಗ್ರರ ಉಪಟಳ ಹೆಚ್ಚಾಗಿರುವ ಪ್ರದೇಶದಲ್ಲಿ ಕರ್ತವ್ಯ ನಿರ್ವಹಣೆಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಸೇನೆಯ ಪ್ರಧಾನ ಕಚೇರಿಯಿಂದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಈ ಅವಕಾಶವನ್ನು ಕಲ್ಪಿಸಲಾಗಿದೆ.