ಬೆಂಗಳೂರು, ಮಾ. 27 (DaijiworldNews/TA) : 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ಮಾರ್ಚ್ 28ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ಎಂ. ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಟಿಕೆಟ್ಗಳು ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದ್ದು, ಶಾಸಕರಲ್ಲಿ ಅಸಮಾಧಾನವನ್ನು ಹುಟ್ಟಿಸಿದೆ. ಇನ್ನು ಇದೆಲ್ಲದರ ನಡುವೆ ವಿಧಾನಸೌಧದಲ್ಲೂ ಐಪಿಎಲ್ ಟಿಕೆಟ್ ಕುರಿತಾದ ಚರ್ಚೆ ಜೋರಾಗಿ ನಡೆದಿದೆ.

ಪ್ರತಿಪಕ್ಷ ನಾಯಕ ಆರ್. ಅಶೋಕ್ ಶಾಸಕರಿಗೆ ಟಿಕೆಟ್ ಸಿಗದೇ ಅವಮಾನವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. “ಕ್ರಿಕೆಟ್ ಆಟಗಾರರಿಗೆ ಹಣ ಕೊರತೆ ಅಲ್ಲ. ಶಾಸಕರಿಗೆ ಒಂದು ಪಾಸ್ ಕೊಡೋದಿಲ್ಲ. ಟಿಕೆಟ್ಗೆ ಅಂಗಲಾಚಬೇಕು, ನನ್ನ ಹೆಂಡತಿ, ಮಗನಿಗೂ ಸಿಗುವುದಿಲ್ಲ” ಎಂದು ತೀವ್ರವಾಗಿ ಟೀಕಿಸಿದರು.
ಇದೇ ವೇಳೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮಧ್ಯಪ್ರವೇಶಿಸಿ, “ಎಂಎಲ್ಎಗಳಿಗೆ ಒಂದು ಟಿಕೆಟ್ ಕೊಡಬೇಕು, ಸಾಮಾನ್ಯ ಗ್ಯಾಲರಿಯಲ್ಲಿ ಕುಳಿತುಕೊಳ್ಳಬೇಕು. ಆದರೆ ಕುಟುಂಬ ಸದಸ್ಯರು ಕೂಡ ಹೋಗಲು ಅವಕಾಶ ಬೇಕು. ಶಾಸಕರು ಹಾಗೂ ಸಚಿವರಿಗೆ ಪ್ರತ್ಯೇಕ ಗ್ಯಾಲರಿ ಮಾಡಬೇಕು” ಎಂದು ಮನವಿ ಸಲ್ಲಿಸಿದರು.
ಯುಟಿ ಖಾದರ್ ಹೇಳಿಕೆಯಲ್ಲಿ, “ಶಾಸಕರಿಗೆ ಅಗೌರವವಾಗುವುದು ಸರಿಯಲ್ಲ. ಕನಿಷ್ಠ 4 ಟಿಕೆಟ್ ಕುಟುಂಬದವರಿಗೆ ಕೊಡಬೇಕು. ಸರ್ಕಾರ KSCA ಜೊತೆ ಮಾತಾಡಬೇಕು” ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಸ್ಪೀಕರ್ ಮಾತುಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶಾಸಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.