ಬೆಂಗಳೂರು, ಮಾ. 28 (DaijiworldNews/AA): ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಆರ್ಸಿಬಿ ತಂಡದ ಮೂವರು ಅಲಭ್ಯರಾಗಿದ್ದಾರೆ.

ಆರ್ಸಿಬಿ ತಂಡದಲ್ಲಿರುವ ಆಸ್ಟ್ರೇಲಿಯನ್ ವೇಗಿ ಜೋಶ್ ಹೇಝಲ್ವುಡ್ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಇಂದು ಅವರು ಕಣಕ್ಕಿಳಿಯುತ್ತಿಲ್ಲ.
ಆರ್ಸಿಬಿ ತಂಡದಲ್ಲಿರುವ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಇನ್ನೂ ಬೆಂಗಳೂರಿಗೆ ಬರದ ಹಿನ್ನೆಲೆ ಇಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ನುವಾನ್ಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಐಪಿಎಲ್ ಆಡಲು ಇನ್ನೂ ಸಹ ಎನ್ಒಸಿ ನೀಡಿಲ್ಲ. ಅಂದರೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ನಡೆಸುವ ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾದರೆ ಮಾತ್ರ ಅವರಿಗೆ ಐಪಿಎಲ್ನಲ್ಲಿ ಆಡಲು ಅವಕಾಶ ದೊರೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಎಡಗೈ ವೇಗಿ ಯಶ್ ದಯಾಳ್ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ವೈಯುಕ್ತಿಕ ಕಾರಣಗಳಿಂದಾಗಿ ಯಶ್ ದಯಾಳ್ ಈ ಬಾರಿಯ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಈ ಮೂವರಲ್ಲಿ ಜೋಶ್ ಹೇಝಲ್ವುಡ್ ಹಾಗೂ ಯಶ್ ದಯಾಳ್ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿದ್ದರು. ಈ ಹಿನ್ನೆಲೆ ಆರ್ಸಿಬಿ ಇಬ್ಬರು ಹೊಸ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಇಂದು ಜೋಶ್ ಹೇಝಲ್ವುಡ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸದಾಗಿ ಆಯ್ಕೆಯಾಗಿರುವ ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ, ಯಶ್ ದಯಾಳ್ ಬದಲಿಗೆ ಮಂಗೇಶ್ ಯಾದವ್ ಅವರಿಗೆ ಅವಕಾಶ ಸಿಗಲಿದೆ.