ಚೆನ್ನೈ, ಏ. 15 (DaijiworldNews/TA): ಐಪಿಎಲ್ 2026ರ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ನಾಯಕ ಅಜಿಂಕ್ಯ ರಹಾನೆ ಅವರಿಗೆ ರೂ.12 ಲಕ್ಷ ದಂಡ ವಿಧಿಸಲಾಗಿದೆ.

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ ತಂಡವು ನಿಗದಿತ ಸಮಯದೊಳಗೆ ತನ್ನ 20 ಓವರ್ಗಳನ್ನು ಪೂರ್ಣಗೊಳಿಸಲು ವಿಫಲವಾಗಿತ್ತು. ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಇದು ಕನಿಷ್ಠ ಓವರ್ ರೇಟ್ ಉಲ್ಲಂಘನೆಯಾಗಿದ್ದು, ಈ ಸೀಸನ್ನಲ್ಲಿ ಕೆಕೆಆರ್ ತಂಡದ ಮೊದಲ ತಪ್ಪಾಗಿರುವುದರಿಂದ ನಾಯಕ ರಹಾನೆಗೆ ರೂ.12 ಲಕ್ಷ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಐಪಿಎಲ್ ನಿಯಮಗಳ ಪ್ರಕಾರ ಪ್ರತಿ ತಂಡವು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳ ಒಳಗೆ ಪೂರ್ಣಗೊಳಿಸಬೇಕು. ಈ ಸಮಯ ಮೀರಿದರೆ ಫೀಲ್ಡಿಂಗ್ ನಿರ್ಬಂಧ ಸೇರಿದಂತೆ ಶಿಕ್ಷೆಗಳು ವಿಧಿಸಲಾಗುತ್ತವೆ.
ನಿಯಮದ ಪ್ರಕಾರ, ಇದೇ ತಪ್ಪು ಎರಡನೇ ಬಾರಿ ನಡೆದರೆ ನಾಯಕನಿಗೆ ರೂ. 24 ಲಕ್ಷ ದಂಡ ಹಾಗೂ ತಂಡದ ಆಟಗಾರರಿಗೆ ಪಂದ್ಯದ ಶುಲ್ಕದ 25% ಅಥವಾ ರೂ.6 ಲಕ್ಷದಷ್ಟು ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘನೆಯಾದರೆ ನಾಯಕನಿಗೆ ರೂ.30 ಲಕ್ಷ ದಂಡ ಹಾಗೂ ಹೆಚ್ಚುವರಿ ಡಿಮೆರಿಟ್ ಪಾಯಿಂಟ್ಗಳು ಸೇರಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಮಾತ್ರ ಪಂದ್ಯ ನಿಷೇಧವೂ ಸಾಧ್ಯ.
ಈ ನಡುವೆ ಕೆಕೆಆರ್ ತಂಡದ ಪ್ರದರ್ಶನವೂ ಹಿನ್ನಡೆಯಲ್ಲಿದ್ದು, ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಅನುಭವಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಒಂದು ಅಂಕ ಪಡೆದಿದ್ದ ಕೆಕೆಆರ್, ಇದೀಗ ಸಿಎಸ್ಕೆ ವಿರುದ್ಧದ ಸೋಲಿನ ಜೊತೆಗೆ ಸ್ಲೋ ಓವರ್ ರೇಟ್ ದಂಡಕ್ಕೂ ಒಳಗಾಗಿದೆ.