ಬೆಂಗಳೂರು ಏ. 16 (DaijiworldNews/AK): ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಆತಿಥೇಯ ತಂಡದ ಡಿಜೆ ವರ್ತನೆಯ ವಿರುದ್ಧ ಸಿಎಸ್ಕೆ ಮ್ಯಾನೇಜ್ಮೆಂಟ್ ಬಿಸಿಸಿಐಗೆಅಧಿಕೃತ ದೂರು ನೀಡಿದೆ.

ಏಪ್ರಿಲ್ 5 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ವಿರುದ್ಧ ಪಂದ್ಯದ ವೇಳೆ ಸಿಎಸ್ಕೆ ಆಟಗಾರರು ಔಟಾದಾಗ ಮತ್ತು ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ರಂಜಿಸುವ ನೆಪದಲ್ಲಿ ಡಿಜೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ…” ಎಂಬ ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾರೆ. ಈ ಹಾಡನ್ನು ಸಾಮಾನ್ಯವಾಗಿ ದಕ್ಷಿಣ ಭಾರತೀಯರನ್ನು, ವಿಶೇಷವಾಗಿ ತಮಿಳು ಜನರನ್ನು ಅಣಕಿಸಲು ಮೀಮ್ಗಳಲ್ಲಿ ಬಳಸಲಾಗುತ್ತದೆ. ಇದು ಸಿಎಸ್ಕೆ ಆಟಗಾರರು ಮತ್ತು ಮ್ಯಾನೇಜ್ಮೆಂಟ್ನ ಕೆಂಗಣ್ಣಿಗೆ ಗುರಿಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌರವಕ್ಕೆ ಧಕ್ಕೆ: “ದೋಸೆ ಇಡ್ಲಿ” ಹಾಡನ್ನು ವ್ಯಂಗ್ಯದ ರೂಪದಲ್ಲಿ ಬಳಸಿರುವುದು ಆಟಗಾರರ ಮತ್ತು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ. ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದದ್ದು ಎಂದು ಅವರು ವಾದಿಸಿದ್ದಾರೆ.
ಸಿಎಸ್ಕೆ ಆಟಗಾರರು ಔಟಾಗಿ ಪೆವಿಲಿಯನ್ಗೆ ಮರಳುವಾಗ ಆರ್ಸಿಬಿ ನೇಮಿಸಿದ ಡಿಜೆ ಮೈಕ್ನಲ್ಲಿ ಕೆಲವು ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಿದ್ದಾರೆ ಎಂಬುದು ತಂಡದ ಆರೋಪ. ಡಿಜೆಗಳು ತವರು ತಂಡವನ್ನು ಬೆಂಬಲಿಸಲಿ, ಆದರೆ ಎದುರಾಳಿ ತಂಡವನ್ನು ಅವಮಾನಿಸುವುದು ಸರಿಯಲ್ಲ ಎಂದು ಸಿಎಸ್ಕೆ ಸ್ಪಷ್ಟಪಡಿಸಿದೆ.