ಮುಂಬೈ, ಆ 21 (DaijiworldNews/SM): ಐಪಿಎಲ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪದಿಂದಾಗಿ ಕ್ರಿಕೆಟ್ ಜೀವನವನ್ನೇ ಕಳೆದುಕೊಂಡಿದ್ದ ಟೀಂ ಇಂಡಿಯಾ ಆಟಗಾರ ಶ್ರೀಶಾಂತ್ ಗೆ ಬಿಸಿಸಿಐ ಗುಡ್ ನ್ಯೂಸ್ ನೀಡಿದೆ. ಸ್ಪಾಟ್ ಫಿಕ್ಸಿಂಗ್ ಸಂಬಂಧ ಶ್ರೀಶಾಂತ್ ಗೆ ವಿಧಿಸಿದ್ದ ಆಜೀವ ನಿಷೇಧವನ್ನು ತೆರವುಗೊಳಿಸಿದೆ.
2013ರಲ್ಲಿ ನಡೆದ ಐಪಿಎಲ್ ಸರಣಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐ ಶ್ರೀಶಾಂತ್ ಗೆ ಆಜೀವ ನಿಷೇಧ ಹೇರಿತ್ತು. ಆದರೆ ಈ ಶಿಕ್ಷೆಯನ್ನು ಇದೀಗ ಕಡಿಮೆಗೊಳಿಸಿ ಆದೇಶ ಹೊರಡಿಸಿದೆ. ಅಜೀವ ನಿಷೇಧದ ಬದಲು 7 ವರ್ಷಗಳ ಕಾಲ ಮಾತ್ರ ನಿಷೇಧ ವಿಧಿಸಿದೆ. ಅಂದರೆ ಮುಂದಿನ ವರ್ಷವೇ ಅವರಿಗೆ ರಿಲೀಫ್ ಸಿಗಲಿದೆ. 2020ರ ಆಗಸ್ಟ್ ತಿಂಗಳಿನಿಂದ ಅವರು ಕಣಕ್ಕಿಳಿಯಬಹುದಾಗಿದೆ.
ಇನ್ನು ಈ ಹಿಂದೆ ಬಿಸಿಸಿಐ ವಿಧಿಸಿದ್ದ ಆಜೀವ ನಿಷೇಧವನ್ನು ಪ್ರಶ್ನಿಸಿ ಶ್ರೀಶಾಂತ್ ಕೋರ್ಟ್ ಮೆಟ್ಟಿಲೇರಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್ ಶ್ರೀಶಾಂತ್ ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಬಿಸಿಸಿಐ ಮಾತ್ರ ಆಜೀವ ನಿಷೇಧವನ್ನು ತೆರವುಗೊಳಿಸಿರಲಿಲ್ಲ. ಇದು ಶ್ರೀಶಾಂತ್ ಗೆ ಹಿನ್ನಡೆಯನ್ನುಂಟು ಮಾಡಿತ್ತು. ಇದೀಗ ನಿರ್ಧಾರ ಬದಲಾಯಿಸುವ ಮೂಲಕ ಶ್ರೀಶಾಂತ್ ಗೆ ರಿಲೀಫ್ ನೀಡಲಾಗಿದೆ.