ಅಹಮದಾಬಾದ್, ಮೇ. 22 (DaijiworldNews/AK): ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಓವರ್ ಕಾಯ್ದುಕೊಂಡ ಕಾರಣ ಐಪಿಎಲ್ ಆಡಳಿತ ಮಂಡಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ಗೆ 24 ಲಕ್ಷ ರೂ. ಮತ್ತು ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಉಳಿದೆಲ್ಲಾ ಹನ್ನೊಂದು ಜನ ಆಟಗಾರರಿಗೆ ತಲಾ 6 ಲಕ್ಷ ದಂಡ ವಿಧಿಸಿ ಪ್ರಕಟಣೆ ಹೊರಡಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ 89 ರನ್ಗಳ ಅಂತರದಲ್ಲಿ ಸೋಲುವ ಮೂಲಕ 2026ರ ಐಪಿಎಲ್ ಅಭಿಯಾನವನ್ನು ಮುಗಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗುಜರಾತ್ ತಂಡ 4 ವಿಕೆಟ್ ನಷ್ಟಕ್ಕೆ 229 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಬಳಿಕ 230 ರನ್ಗಳ ಗುರಿ ಬೆನ್ನತ್ತಿದ ಸಿಎಸ್ಕೆ ತಂಡಕ್ಕೆ ಮೊಹಮ್ಮದ್ ಸಿರಾಜ್ ಅವರು ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಆರಂಭದಲ್ಲೇ ಆಘಾತ ನೀಡಿದರು.
ಮ್ಯಾಥ್ಯೂ ಶಾರ್ಟ್ 14 ಎಸೆತಗಳಲ್ಲಿ 24 ರನ್ ಸಿಡಿಸಿ ಕಗಿಸೊ ರಬಾಡ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಶಿವಂ ದುಬೆ 17 ಎಸೆತಗಳಲ್ಲಿ 47 ರನ್ಗಳ ಸ್ಫೋಟಕ ಇನ್ನಿಂಗ್ಸ್ ಸಿಡಿಸಿದ್ದು ಬಿಟ್ಟರೆ ಉಳಿದಂತೆ ಎಲ್ಲಾ ಬ್ಯಾಟರ್ಗಳು ಬಹುಬೇಗನೆ ವಿಕೆಟ್ ಒಪ್ಪಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹೀಗಾಗಿ, ಸಿಎಸ್ಕೆ ತಂಡ ಅಂತಿಮವಾಗಿ ಜಿಟಿ ವಿರುದ್ಧದ ಹೀನಾಯ ಸೋಲಿನೊಂದಿಗೆ ಈ ಬಾರಿಯ ಐಪಿಎಲ್ ಪ್ಲೇಆಫ್ ರೇಸ್ನಿಂದ ಹೊರಬಿತ್ತು.
2026ರ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಗುಜರಾತ್ ಟೈಟಾನ್ಸ್ ವಿರುದ್ಧದ 66 ನೇ ಪಂದ್ಯದ ವೇಳೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.