ಬೆಂಗಳೂರು, ಮೇ. 24 (DaijiworldNews/AA): ಕ್ವಾಲಿಫೈಯರ್-1 ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ ಬೆರಳಿನ ಗಾಯದಿಂದ ಬಳಲುತ್ತಿರುವ ಬೆಥೆಲ್ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ.

ಜಾಕೋಬ್ ಬೆಥೆಲ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವ ಬಗ್ಗೆ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಜಾಕೋಬ್ ಬೆಥೆಲ್ ಅವರ ಉಂಗುರದ ಬೆರಳಿಗೆ ಗಾಯವಾಗಿತ್ತು. ಮುಂಬರುವ ಟೆಸ್ಟ್ ಸರಣಿಗೆ ಮುನ್ನ ಬೆಥೆಲ್ ಅವರು ಇಂಗ್ಲೆಂಡ್ ತಂಡವನ್ನ ಸೇರಿಕೊಳ್ಳಬೇಕಿದೆ. ಬೇಗ ಗುಣಮುಖರಾಗಿ ಬೆಜಿ ಎಂದು ಆರ್ಸಿಬಿ ಶುಭಹಾರೈಸಿದೆ.
ಕಳೆದ ಮೇ 17 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಜಾಕೋಬ್ ಬೆಥೆಲ್ ಅದ್ಬುತ ಫೀಲ್ಡಿಂಗ್ ಮಾಡಿದ್ದರು. ಈ ವೇಳೆ ಉಂಗುರದ ಬೆರಳಿಗೆ ಗಾಯವಾಗಿತ್ತು. ಇದರಿಂದ ಬೆಥೆಲ್ ಮೇ 22 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯವನ್ನು ಆಡಿರಲಿಲ್ಲ. ಅವರ ಬದಲಿಗೆ ವೆಂಕಟೇಶ್ ಅಯ್ಯರ್ ಆರಂಭಿಕರಾಗಿ ಆಡಿದ್ದರು.
ಇನ್ನು ಬೆಥೆಲ್ ಕೂಡ ಫಿಲ್ ಸಾಲ್ಟ್ ಗಾಯಗೊಂಡ ಕಾರಣ ಅವರ ಬದಲಿಗೆ ಆರಂಭಿಕರಾಗಿ ಆಟವಾಡುತ್ತಿದ್ದರು. ಅವರು ಆಡಿದ ಏಳು ಪಂದ್ಯಗಳಲ್ಲಿ ಕೇವಲ 96 ರನ್ ಕಲೆಹಾಕಲಷ್ಟೇ ಶಕ್ತರಾದರು. ಇದೇ ವರ್ಷಾರಂಭದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಾಕೋಬ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ವಿರುದ್ಧ ಶತಕ ಸಿಡಿಸಿದ್ದ ಜಾಕೋಬ್ ಬೆಥೆಲ್ 2026ರ ಈ ಐಪಿಎಲ್ ಆವೃತ್ತಿಯಲ್ಲಿ ಬೆಥೆಲ್ ಉತ್ತಮ ಪ್ರದರ್ಶನ ನೀಡಿಲ್ಲ.