ಲಕ್ನೋ, ಮೇ. 24 (DaijiworldNews/AA): ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಉತ್ತಮ ಬೌಲಿಂಗ್ ಮೂಲಕ ಎಚ್ಚರ ಗಮನ ಸೆಳೆದಿದ್ದಾರೆ. ಪಂದ್ಯ ಮುಗಿದ ತಕ್ಷಣ ಸಚಿನ್ ತೆಂಡೂಲ್ಕರ್ ಮಗನ ಆಟದ ಬಗ್ಗೆ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಲಕ್ನೋದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 4 ಓವರ್ಗಳಲ್ಲಿ ಅರ್ಜುನ್ 36 ರನ್ ನೀಡಿದ್ದು, ಜೊತೆಗೆ ಪಂಜಾಬ್ನ ಅಪಾಯಕಾರಿ ಬ್ಯಾಟರ್ ಪ್ರಬ್ಸಿಮ್ರಾನ್ ಸಿಂಗ್ ಅವರನ್ನು ಔಟ್ ಮಾಡಿದರು. ಇನ್ನು ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿದ ಅವರು, ಕೊನೆಯಲ್ಲಿ 5 ಎಸೆತಗಳನ್ನು ಎದುರಿಸಿ 1 ಬೌಂಡರಿಯೊಂದಿಗೆ ಅಜೇಯ 5 ರನ್ ಗಳಿಸಿದರು. ಮಗನ ಈ ಆಟದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸುದೀರ್ಘ ಸಂದೇಶ ಬರೆದು ಶೇರ್ ಮಾಡಿದ್ದಾರೆ.
"ಅರ್ಜುನ್, ನೀನು ನಿಜಕ್ಕೂ ಅದ್ಭುತವಾಗಿ ಆಡಿದ್ದೀಯಾ. ನಿನ್ನ ಸಾಮರ್ಥ್ಯದ ಮೇಲೆ ನೀನು ನಂಬಿಕೆ ಇಟ್ಟು, ನಿರಂತರವಾಗಿ ಕಠಿಣ ಪರಿಶ್ರಮ ಪಟ್ಟಿದ್ದೀಯಾ. ಟೂರ್ನಿಯ ಕೊನೆಯ ಪಂದ್ಯದವರೆಗೂ ನಿನಗೆ ಸಿಗುವ ಒಂದು ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯುತ್ತಾ, ಸದಾ ಪಾಸಿಟಿವ್ ಆಗಿದ್ದ ನಿನ್ನ ಗುಣದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಕ್ರಿಕೆಟ್ ಕೇವಲ ಕೌಶಲ್ಯವನ್ನಷ್ಟೇ ಅಲ್ಲ, ಆಟಗಾರನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ನೀನು ಈ ಎರಡೂ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೀಯಾ. ಸದಾ ವಿನಮ್ರತೆಯಿಂದ ನೆಲದ ಮೇಲೆಯೇ ಕಾಲಿಟ್ಟರು, ಆಟವನ್ನು ಪ್ರೀತಿಸುತ್ತಾ ಹೀಗೆಯೇ ಮುಂದುವರಿ" ಎಂದು ಮಗನ ಆಟದ ಬಗ್ಗೆ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.