ಮುಂಬೈ, ಜೂ. 14 (DaijiworldNews/AA): ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026ರ ಮುಂಬೈ ಟಿ20 ಲೀಗ್ ಫೈನಲ್ ಪಂದ್ಯದಲ್ಲಿ ಎಆರ್ಸಿಎಸ್ ಅಂಧೇರಿ ತಂಡ ಹಾಗೂ ಮರಾಠ ರಾಯಲ್ಸ್ ತಂಡದ ಆಟಗಾರರ ನಡುವೆ ವಾಗ್ವಾದ ನಡೆದು, ನೂಕಾಟ, ತಳ್ಳಾಟ ನಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಮರಾಠ ರಾಯಲ್ಸ್ ತಂಡವು 20 ಓವರ್ಗಳಲ್ಲಿ 154 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಎಆರ್ಸಿಎಸ್ ಅಂಧೇರಿ ತಂಡ 20 ಓವರ್ಗಳಲ್ಲಿ 146 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮರಾಠ ರಾಯಲ್ಸ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಎಆರ್ಸಿಎಸ್ ಅಂಧೇರಿ ತಂಡದ ಬ್ಯಾಟರ್ ಗೌರವ್ ಜಾಧವ್ ಅವರು ಮರಾಠ ರಾಯಲ್ಸ್ ಬೌಲರ್ ಇರ್ಫಾನ್ ಉಮೈರ್ ಅವರಿಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ, ಮುಂದಿನ ಎಸೆತದಲ್ಲೇ ಉಮೈರ್ ಅವರು ಗೌರವ್ ಅವರನ್ನು ಎಲ್ಬಿಡಬ್ಲ್ಯೂ ಮಾಡಿ ಔಟ್ ಮಾಡಿದರು. ಈ ವೇಳೆ ಪೆವಿಲಿಯನ್ಗೆ ಮರಳುತ್ತಿದ್ದ ಗೌರವ್ ಹಾಗೂ ಮರಾಠ ರಾಯಲ್ಸ್ ವೇಗಿ ತುಷಾರ್ ದೇಶಪಾಂಡೆ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ಅಷ್ಟಕ್ಕೇ ನಿಲ್ಲದೆ ಡಗೌಟ್ ವರೆಗೂ ತಲುಪಿದೆ.
ಮರಾಠ ರಾಯಲ್ಸ್ ಆಟಗಾರರೊಬ್ಬರು ಅಂಧೇರಿ ಡಗೌಟ್ ಬಳಿ ತೆರಳಿದಾಗ, ಅಂಧೇರಿ ತಂಡದ ನಾಯಕ ಶಿವಂ ದುಬೆ ಸೇರಿದಂತೆ ಉಭಯ ತಂಡಗಳ ಆಟಗಾರರ ನಡುವೆ ವಾಗ್ವಾದ ನಡೆದಿದೆ. ಜೊತೆಗೆ ನೂಕಾಟ ತಳ್ಳಾಟವೂ ನಡೆದಿದೆ. ಇದನ್ನು ಕಂಡ ಆನ್-ಫೀಲ್ಡ್ ಅಂಪೈರ್ಗಳು ಮತ್ತು ಉಭಯ ತಂಡಗಳ ಸಹಾಯಕ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆಟಗಾರರನ್ನು ಸಮಾಧಾನಗೊಳಿಸಿದ್ದಾರೆ.