ಧರ್ಮಶಾಲಾ, ಜೂ. 14 (DaijiworldNews/AA): ರೋಹಿತ್ ಶರ್ಮಾ ಅವರ ರನೌಟ್ ನಲ್ಲಿ ನನ್ನದೇನು ತಪ್ಪಿಲ್ಲ ಎಂದು ನಾಯಕ ಶುಭಮನ್ ಗಿಲ್ ಸ್ಪಷ್ಟನೆ ನೀಡಿದ್ದಾರೆ.

ರೋಹಿತ್ ಶರ್ಮಾ ಅವರ ರನೌಟ್ ಬಗ್ಗೆ ಮಾತನಾಡಿದ ಗಿಲ್, "ರೋಹಿತ್ ಶರ್ಮಾ ಅವರು ಔಟಾಗಿದ್ದು ನಿಜಕ್ಕೂ ದುರದೃಷ್ಟಕರ. ಔಟಾದ ಬಳಿಕ ಸ್ವತಃ ರೋಹಿತ್ ಶರ್ಮಾ ಅವರೇ ರಿಪ್ಲೇ ನೋಡಿ ಇದರಲ್ಲಿ ನಿನ್ನದೇನು ತಪ್ಪಿಲ್ಲ ಬಿಡು, ಎಲ್ಲವೂ ಸರಿಯಿದೆ ಎಂದರು. ರೋಹಿತ್ ಶರ್ಮಾ ಓಡಲು ಮುಂದಾದ ವೇಳೆ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ನನಗೆ ಬೌಲರ್ ಅಡ್ಡ ಬಂದ ಕಾರಣ ನಮ್ಮಿಬ್ಬರ ಮಧ್ಯೆ ಸಂವಹನ ಕೊರತೆಯಾಯಿತು" ಎಂದು ತಿಳಿಸಿದ್ದಾರೆ.
ಅಲ್ಲಾಹ್ ಗಜನ್ಫರ್ ಎಸೆದ 6ನೇ ಓವರ್ನಲ್ಲಿ ರೋಹಿತ್ ಶರ್ಮಾ ಬಾಲ್ ಅನ್ನು ಮಿಡ್-ಆನ್ ಕಡೆಗೆ ಬಾರಿಸಿ ಸಿಂಗಲ್ ರನ್ ಗಳಿಸುವ ಭರದಲ್ಲಿ ಅರ್ಧ ಪಿಚ್ಗೆ ಓಡಿ ಬಂದಿದ್ದರು. ಇತ್ತ ಗಿಲ್ ಅವರಿಗೆ ಬೌಲರ್ ಅಡ್ಡ ಬಂದ್ದಿರಿಂದ ಅವರು ಓಡದೇ ಅಲ್ಲೇ ನಿಂತ ಕಾರಣ ರೋಹಿತ್ ಶರ್ಮಾ ರನೌಟ್ ಆಗಿದ್ದಾರೆ.
ಈ ವೇಳೆ ರೋಹಿತ್ ಅವರು ಗಿಲ್ ವಿರುದ್ಧ ಅಸಮಾಧಾನ ಹೊರಹಾಕಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದಾರೆ. ರೋಹಿತ್ ಶರ್ಮಾ ಅವರು ಕೇವಲ 16 ರನ್ ಗಳಿಸಿ ರನೌಟ್ ಆಗಿದ್ದರಿಂದ ನಿರಾಶೆಗೊಂಡಿದ್ದರು.
ಇನ್ನು ಮಳೆಯಿಂದ ತಡವಾಗಿ ಆರಂಭಗೊಂಡ ಕಾರಣ ಪಂದ್ಯವನ್ನು 25 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪ್ರವಾಸಿ ಅಫ್ಘಾನಿಸ್ತಾನ ತಂಡ 24.5 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಭಾರತ ತಂಡ 22.5 ಓವರ್ಗಳಲ್ಲೇ 3 ವಿಕೆಟ್ ನಷ್ಟಕ್ಕೆ 195 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಈ ಮೂಲಕ ಭಾರತ 1.0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.