ಕನ್ಸಾಸ್ ಸಿಟಿ, ಜೂ. 18 (DaijiworldNews/TA): ಫುಟ್ಬಾಲ್ ಹೆಸರಾಂತ ನಾಯಕ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ತಮ್ಮ ಅದ್ಭುತ ಆಟದ ಮೂಲಕ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಅಮೇರಿಕಾದ ಕನ್ಸಾಸ್ ಸಿಟಿಯ ಆರೋಹೆಡ್ ಕ್ರೀಡಾಂಗಣದಲ್ಲಿ ಅಲ್ಜೀರಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸುವ ಮೂಲಕ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನಲ್ಲಿದ್ದ ವಿಶ್ವಕಪ್ ದಾಖಲೆಯನ್ನು ಮುರಿದಿದ್ದಾರೆ.

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡದ ಪರ ಕಣಕ್ಕಿಳಿದ ಮೆಸ್ಸಿ, ಅಲ್ಜೀರಿಯಾ ವಿರುದ್ಧ ಮೂರು ಗೋಲುಗಳನ್ನು ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಈ ಸಾಧನೆಯೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಹ್ಯಾಟ್ರಿಕ್ ಗೋಲು ದಾಖಲಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಹಿಂದೆ ಈ ದಾಖಲೆ ಪೋರ್ಚುಗಲ್ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನಲ್ಲಿತ್ತು. 2018ರ ಫಿಫಾ ವಿಶ್ವಕಪ್ನಲ್ಲಿ ಸ್ಪೇನ್ ವಿರುದ್ಧ ನಡೆದ ಪಂದ್ಯದಲ್ಲಿ ರೊನಾಲ್ಡೊ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು. ಆ ವೇಳೆ ಅವರಿಗೆ 33 ವರ್ಷ 130 ದಿನ ವಯಸ್ಸಾಗಿತ್ತು. ಈ ಸಾಧನೆಯ ಮೂಲಕ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ರೊನಾಲ್ಡೊ ನಿರ್ಮಿಸಿದ್ದರು. ಈಗ 38 ವರ್ಷದ ಲಿಯೋನೆಲ್ ಮೆಸ್ಸಿ ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ರೊನಾಲ್ಡೊ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ವಿಶ್ವ ಫುಟ್ಬಾಲ್ನಲ್ಲಿ ಕಳೆದ ಎರಡು ದಶಕಗಳಿಂದ ಮೆಸ್ಸಿ ಮತ್ತು ರೊನಾಲ್ಡೊ ನಡುವಿನ ಪೈಪೋಟಿ ಅಭಿಮಾನಿಗಳ ಗಮನ ಸೆಳೆದಿದೆ. ಈ ಬಾರಿಯ ವಿಶ್ವಕಪ್ನಲ್ಲೂ ಇಬ್ಬರು ದಿಗ್ಗಜರ ನಡುವೆ ದಾಖಲೆಗಳ ಸಮರ ಮುಂದುವರಿಯುವ ಸಾಧ್ಯತೆ ಇದೆ. ಮೆಸ್ಸಿ ಹೊಸ ದಾಖಲೆ ನಿರ್ಮಿಸಿದ್ದರೂ, ಮುಂಬರುವ ಪಂದ್ಯಗಳಲ್ಲಿ ರೊನಾಲ್ಡೊ ಕೂಡ ಅದನ್ನು ಮರುಪಡೆಯುವ ಅವಕಾಶ ಹೊಂದಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಮೆಸ್ಸಿ-ರೊನಾಲ್ಡೊ ದಾಖಲೆ ಪೈಪೋಟಿ ಫುಟ್ಬಾಲ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.