ದೋಹಾ, ಜೂ. 20 (DaijiworldNews/TA): ಭಾರತದ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸುಮಾರು ಒಂಬತ್ತು ತಿಂಗಳ ವಿರಾಮದ ಬಳಿಕ ಸ್ಪರ್ಧಾತ್ಮಕ ಅಥ್ಲೆಟಿಕ್ಸ್ಗೆ ಮರಳಿದ್ದು, ಖತಾರ್ನ ದೋಹಾದಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಕೆಲ ತಿಂಗಳುಗಳ ಕಾಲ ಮೈದಾನದಿಂದ ದೂರವಿದ್ದ ನೀರಜ್, 85.69 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಉತ್ತಮ ಕಂಬ್ಯಾಕ್ ದಾಖಲಿಸಿದ್ದಾರೆ. ಈ ಪ್ರದರ್ಶನದೊಂದಿಗೆ ನೀರಜ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರೂ, 2026ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್ಗೆ ಅಧಿಕೃತ ಅರ್ಹತೆ : ಮುಂಬರುವ ಗ್ಲ್ಯಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) 82.61 ಮೀಟರ್ ಅರ್ಹತಾ ಮಾನದಂಡ ನಿಗದಿಪಡಿಸಿತ್ತು. ಈ ಗುರಿಯನ್ನು ದೋಹಾ ಡೈಮಂಡ್ ಲೀಗ್ನಲ್ಲೇ ನೀರಜ್ ಸಾಧಿಸಿದ್ದಾರೆ.
ಎರಡನೇ ಪ್ರಯತ್ನದಲ್ಲೇ 82.77 ಮೀಟರ್ ದೂರ ಎಸೆದ ನೀರಜ್ ಅರ್ಹತಾ ಗುರಿ ಮುಟ್ಟಿದರೆ, ಮೂರನೇ ಪ್ರಯತ್ನದಲ್ಲಿ 85.69 ಮೀಟರ್ ದೂರ ಎಸೆಯುವ ಮೂಲಕ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು.
ನೀರಜ್ ಚೋಪ್ರಾ ಅವರ ಎಸೆತಗಳ ವಿವರ :
ಮೊದಲ ಎಸೆತ: ಫೌಲ್
ಎರಡನೇ ಎಸೆತ: 82.77 ಮೀಟರ್
ಮೂರನೇ ಎಸೆತ: 85.69 ಮೀಟರ್
ನಾಲ್ಕನೇ ಎಸೆತ: 83.45 ಮೀಟರ್
ಐದನೇ ಎಸೆತ: ಫೌಲ್
ಆರನೇ ಎಸೆತ: ಅವಕಾಶ ಸಿಗಲಿಲ್ಲ
ಆರನೇ ಎಸೆತಕ್ಕೆ ಅವಕಾಶ ಸಿಗದಿದ್ದು ಯಾಕೆ? : ಡೈಮಂಡ್ ಲೀಗ್ ನಿಯಮದ ಪ್ರಕಾರ ಮೊದಲ ಐದು ಸುತ್ತುಗಳ ಅಂತ್ಯದಲ್ಲಿ ಅಂಕಪಟ್ಟಿಯ ಮೊದಲ ಮೂರು ಸ್ಥಾನಗಳಲ್ಲಿರುವ ಕ್ರೀಡಾಪಟುಗಳಿಗೆ ಮಾತ್ರ ಆರನೇ ಮತ್ತು ಅಂತಿಮ ಎಸೆತದ ಅವಕಾಶ ನೀಡಲಾಗುತ್ತದೆ. ಐದು ಸುತ್ತುಗಳ ಬಳಿಕ ನೀರಜ್ ಚೋಪ್ರಾ ನಾಲ್ಕನೇ ಸ್ಥಾನದಲ್ಲಿದ್ದ ಕಾರಣ ಅವರಿಗೆ ಅಂತಿಮ ಪ್ರಯತ್ನಕ್ಕೆ ಅವಕಾಶ ದೊರೆಯಲಿಲ್ಲ.
ದೋಹಾ ಡೈಮಂಡ್ ಲೀಗ್ ಟಾಪ್-4 ಫಲಿತಾಂಶ:
1. ರುಮೇಶ್ ಪತಿರಾಗೆ (ಶ್ರೀಲಂಕಾ)– 88.68 ಮೀಟರ್ (ಚಿನ್ನ)
2. ಆಂಡರ್ಸನ್ ಪೀಟರ್ಸ್ (ಗ್ರೆನಡಾ) – 86.38 ಮೀಟರ್ (ಬೆಳ್ಳಿ)
3. ಕರ್ಟಿಸ್ ಥಾಂಪ್ಸನ್ (ಅಮೆರಿಕ) – 85.99 ಮೀಟರ್ (ಕಂಚು)
4. ನೀರಜ್ ಚೋಪ್ರಾ (ಭಾರತ)– 85.69 ಮೀಟರ್
ಬೆನ್ನು ನೋವಿನ ಸಮಸ್ಯೆಯಿಂದ ದೀರ್ಘಕಾಲ ಸ್ಪರ್ಧೆಯಿಂದ ದೂರವಿದ್ದ ನೀರಜ್ ಚೋಪ್ರಾ, ದೋಹಾ ಡೈಮಂಡ್ ಲೀಗ್ನಲ್ಲಿ ತೋರಿದ ಪ್ರದರ್ಶನದಿಂದ ಮತ್ತೆ ತಮ್ಮ ಲಯ ಕಂಡುಕೊಂಡಿರುವ ಸೂಚನೆ ನೀಡಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿರುವುದು ಭಾರತೀಯ ಅಥ್ಲೆಟಿಕ್ಸ್ ಅಭಿಮಾನಿಗಳಿಗೆ ಮತ್ತಷ್ಟು ಉತ್ಸಾಹ ತುಂಬಿದೆ.