ಡಲ್ಲಾಸ್, ಜೂ. 23 (DaijiworldNews/AK): ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಸಾರ್ವಕಾಲಿಕ ಮಹಾನ್ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.

ಸೋಮವಾರ ನಡೆದ ಗ್ರೂಪ್ ‘ಜೆ’ ಪಂದ್ಯದಲ್ಲಿ ಆಸ್ಟ್ರಿಯಾ ವಿರುದ್ಧ 2-0 ಅಂತರದ ಭರ್ಜರಿ ಗೆಲುವು ಸಾಧಿಸಿದ ಅರ್ಜೆಂಟೀನಾ ಪರ ಮೆಸ್ಸಿ ಎರಡು ಗೋಲುಗಳನ್ನು ಬಾರಿಸಿ ಈ ಮೈಲಿಗಲ್ಲು ತಲುಪಿದ್ದಾರೆ.
ಈ ಪ್ರದರ್ಶನದೊಂದಿಗೆ ಮೆಸ್ಸಿ ತಮ್ಮ ಒಟ್ಟು ವಿಶ್ವಕಪ್ ಗೋಲುಗಳ ಸಂಖ್ಯೆಯನ್ನು 18 ಕ್ಕೆ ಏರಿಸಿಕೊಂಡಿದ್ದಾರೆ. ಬ್ರೆಜಿಲ್ನ ಮಹಿಳಾ ಫುಟ್ಬಾಲ್ ದಂತಕಥೆ ಮಾರ್ಟಾ (17 ಗೋಲುಗಳು) ಹೆಸರಿನಲ್ಲಿದ್ದ ಜಂಟಿ (ಪುರುಷ ಮತ್ತು ಮಹಿಳಾ) ವಿಶ್ವಕಪ್ ಗೋಲುಗಳ ದಾಖಲೆಯನ್ನು ಮೆಸ್ಸಿ ಈಗ ಸಂಪೂರ್ಣವಾಗಿ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಸತತ 6 ವಿಶ್ವಕಪ್(2006, 2010, 2014, 2018, 2022, 2026) ಪಂದ್ಯಗಳಲ್ಲಿ ಗೋಲು ಗಳಿಸಿದ ವಿಶಿಷ್ಟ ಸಾಧನೆಯನ್ನೂ ಅವರು ಮುಂದುವರಿಸಿದ್ದಾರೆ.