ಮುಂಬೈ, ಜೂ. 23 (DaijiworldNews/AA): ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಶೈಲಿ ಮತ್ತು ಅವರ ಫಿಟ್ನೆಸ್ ಬಗ್ಗೆ ನನಗೆ ತೀವ್ರ ಕಳವಳವಿದೆ. ಈ ಹುಡುಗನ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಆತನ ಕೆರಿಯರ್ ಅಪಾಯಕ್ಕೆ ಸಿಲುಕಲಿದೆ ಎಂದು ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಡ್ಯಾರಿಲ್ ಕಲ್ಲಿನನ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಡ್ಯಾರಿಲ್ ಕಲ್ಲಿನನ್ ಅವರು, "15 ವರ್ಷದ ಸಣ್ಣ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಅತ್ಯಂತ ಭಾರವಾದ ಬ್ಯಾಟ್ ಬಳಸಿ ವೇಗವಾಗಿ ಬೀಸುತ್ತಿದ್ದಾರೆ. ಇದರಿಂದ ಅವರ ಮಣಿಕಟ್ಟು, ಮೊಣಕೈ ಹಾಗೂ ಕೀಲುಗಳ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ" ಎಂದಿದ್ದಾರೆ.
"ವೈಭವ್ ಸೂರ್ಯವಂಶಿ ಇನ್ನೂ ಸಣ್ಣ ಹುಡುಗ. ಅವರ ದೇಹ ಇನ್ನೂ ಸಹ ಸಂಪೂರ್ಣವಾಗಿ ಬೆಳೆಯುವ ಹಂತದಲ್ಲಿದೆ. ಇಂತಹ ಸಮಯದಲ್ಲಿ ಅತಿಯಾದ ಆಕ್ರಮಣಕಾರಿ ಪವರ್-ಹಿಟ್ಟಿಂಗ್ ಮಾಡುವುದರಿಂದ ಮೂಳೆಗಳು ಮತ್ತು ಮಾಂಸಖಂಡಗಳಿಗೆ ಭವಿಷ್ಯದಲ್ಲಿ ಗಂಭೀರ ಹಾನಿಯಾಗಬಹುದು" ಎಂದು ಎಚ್ಚರಿಕೆ ನೀಡಿದ್ದಾರೆ.
"2004ರಲ್ಲಿ ಸಚಿನ್ ಅವರು ಭಾರವಾದ ಬ್ಯಾಟ್ ಬಳಸಿದ್ದರಿಂದಲೇ ಭೀಕರ ಟೆನ್ನಿಸ್ ಎಲ್ಬೋ ಗಾಯಕ್ಕೆ ತುತ್ತಾಗಿ, ವೃತ್ತಿಜೀವನವೇ ಕೊನೆಗೊಳ್ಳುವ ಹಂತ ತಲುಪಿತ್ತು. ಇದೇ ಕಾರಣದಿಂದಾಗಿ ಯುವ ದಾಂಡಿಗ ಕೆರಿಯರ್ ಬೇಗನೆ ಕೊನೆಗೊಳ್ಳುತ್ತಾ ಎಂಬ ಭಯ ಕಾಡ್ತಿದೆ" ಎಂದು ತಿಳಿಸಿದ್ದಾರೆ.
"ಅದರಲ್ಲೂ ಈ ವಯಸ್ಸಿನಲ್ಲೇ ಅತಿಯಾಗಿ ಪಂದ್ಯಗಳನ್ನು ಆಡುವುದು ಮತ್ತು ನಿರಂತರವಾಗಿ ಸಿಕ್ಸರ್-ಬೌಂಡರಿಗಳ ಮೇಲೆಯೇ ಅವಲಂಬಿತವಾಗುವುದು ಕೂಡ ದೀರ್ಘಾವಧಿಯ ವೃತ್ತಿಜೀವನಕ್ಕೆ ಒಳ್ಳೆಯದಲ್ಲ. ಹೀಗಾಗಿ ವೈಭವ್ ಸೂರ್ಯವಂಶಿ ಈ ಬಗ್ಗೆ ಈಗಲೇ ಎಚ್ಚರಿಕೆ ವಹಿಸಿಕೊಳ್ಳುವುದು ಉತ್ತಮ" ಎಂದು ಪೋಸ್ಟ್ ಮಾಡಿದ್ದಾರೆ.