ಮುಂಬೈ, ಜೂ. 24 (DaijiworldNews/AA): ಯುನೈಟೆಡ್ ಕಿಂಗ್ಡಮ್ನ ಅತ್ಯಂತ ಪ್ರತಿಷ್ಠಿತ ನಿಯತಕಾಲಿಕೆಯ ಮುಖಪುಟದಲ್ಲಿ ಬಾಸ್ ಬೇಬಿ ವೈಭವ್ ಸೂರ್ಯವಂಶಿ ಕಾಣಿಸಿಕೊಂಡಿದ್ದು, ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಇಂಗ್ಲೆಂಡ್ನ ಕ್ರಿಕೆಟಿಗ ಜಾನ್ ವಿಸ್ಡನ್ ಅವರು ಸ್ಥಾಪಿಸಿದ ವಿಸ್ಡನ್ ನಿಯತಕಾಲಿಕೆಯನ್ನು "ಕ್ರಿಕೆಟ್ನ ಬೈಬಲ್" ಎಂದೇ ಕರೆಯಲಾಗುತ್ತದೆ. ಕ್ರಿಕೆಟ್ ಲೋಕದಲ್ಲಿ ಅತ್ಯುನ್ನತ ಗೌರವವಿರುವ ಈ ನಿಯತಕಾಲಿಕೆಯ ಮುಖಪುಟದಲ್ಲಿ ವೈಭವ್ ಸೂರ್ಯವಂಶಿ ಕಾಣಿಸಿಕೊಂಡಿದ್ದಾರೆ.
ವಿಸ್ಡನ್ ನಿಯತಕಾಲಿಕೆಯ ಹೊಸ ಸಂಚಿಕೆಯ ಮುಖಪುಟದಲ್ಲಿ ವೈಭವ್ ಸೂರ್ಯವಂಶಿಯ ಫೋಟೋ ಬಳಸಲಾಗಿದೆ. ಜೊತೆಗೆ ಇದಕ್ಕೆ ಕ್ರಿಕೆಟ್ ದಾಖಲೆಗಳನ್ನು ಧೂಳೀಪಟ ಮಾಡಿದ ಹುಡುಗ ಎಂಬಾರ್ಥದ ಕ್ಯಾಪ್ಷನ್ ನೀಡಲಾಗಿದೆ. ಈ ಮೂಲಕ ವಿಸ್ಡನ್ ನಿಯತಕಾಲಿಕೆಯ ಮುಖಪುಟದಲ್ಲಿ ಅತೀ ಕಿರಿಯ ವಯಸ್ಸಿಗೆ ಗೌರವ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ.
ಇನ್ನು ಈ ಸಂಚಿಕೆಯಲ್ಲಿ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ಹಾಗೂ ಆಧುನಿಕ ಕ್ರಿಕೆಟ್ಗೆ ಅವರ ಕೊಡುಗೆಯನ್ನು ಆಳವಾಗಿ ವಿಶ್ಲೇಷಿಸಲಾಗಿದೆ. ಜೊತೆಗೆ ವೈಭವ್ ಇಷ್ಟು ಸಣ್ಣ ವಯಸ್ಸಿನಲ್ಲೇ ಒತ್ತಡವನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂದು ವೈಭವ್ ಸೂರ್ಯವಂಶಿಯ ಮಾರ್ಗದರ್ಶಕರಾದ ಸುಬಿನ್ ಭರುಚಾ ತಿಳಿಸಿರುವ ಬಗ್ಗೆ, ಹಾಗೂ "ನಾನು ನನ್ನ ಜೀವನದಲ್ಲಿ ನೋಡಿದ ಅತ್ಯುತ್ತಮ ಟಿ20 ಬ್ಯಾಟಿಂಗ್ ಪ್ರತಿಭೆ ವೈಭವ್" ಎಂದು ಸೌತ್ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಶ್ಲಾಘಿಸಿರುವ ವಿಶೇಷ ಲೇಖನವೂ ಕೂಡ ಇದರಲ್ಲಿದೆ.