ಮುಂಬೈ, ಜೂ. 25 (DaijiworldNews/AA): ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶತಕ ಗಳಿಸಿದರೆ ತಾನು ಲಾಹೋರ್ನ ಬೀದಿಗಳಲ್ಲಿ ಬೆತ್ತಲೆಯಾಗಿ ನಡೆಯುವುದಾಗಿ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ತನ್ವೀರ್ ಅಹ್ಮದ್ ಘೋಷಿಸಿದ್ದಾರೆ.

ವೈಭವ್ ಸೂರ್ಯವಂಶಿ ಐರ್ಲೆಂಡ್ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ತನ್ವೀರ್ ಅಹ್ಮದ್, "ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಥವಾ ಏಷ್ಯಾ ಉಪಖಂಡದ ಪಿಚ್ಗಳಲ್ಲಿ ರನ್ ಬಾರಿಸುವುದು ಸುಲಭ. ಆದರೆ ಇಂಗ್ಲೆಂಡ್ನ ಸ್ವಿಂಗ್ ಪಿಚ್ನಲ್ಲಿ ಆಡುವ ಸವಾಲೇ ಬೇರೆ. ಹೀಗಾಗಿ ಇಂಗ್ಲೆಂಡ್ನಲ್ಲಿ ವೈಭವ್ ಸೂರ್ಯವಂಶಿ ಒಂದು ಶತಕ ಬಾರಿಸಲಿ ನೋಡೋಣ. ಆತ ಸೆಂಚುರಿ ಸಿಡಿಸಿದರೆ ನಾನು ಲಾಹೋರ್ ಬೀದಿಯಲ್ಲಿ ಬೆತ್ತಲಾಗಿ ಓಡಾಡುವೆ" ಎಂದು ಬಹಿರಂಗ ಸವಾಲು ಹಾಕಿದ್ದಾರೆ.
"ವೈಭವ್ ಸೂರ್ಯವಂಶಿಗೆ 15 ವರ್ಷ ಎನ್ನುವುದು ಶುದ್ಧ ಸುಳ್ಳು. ನನ್ನ ಪ್ರಕಾರ ಆತನಿಗೆ ಕನಿಷ್ಠ 22 ವರ್ಷ ವಯಸ್ಸಾಗಿದೆ. ಆತನ ಹಿಪ್ ರೊಟೇಷನ್ ಮತ್ತು ಸಿಕ್ಸರ್ ಹೊಡೆಯುವ ಶಕ್ತಿ 15 ವರ್ಷದ ಹುಡುಗನಿಗೆ ಇರಲು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲದೆ ವೈಭವ್ ಸ್ಲಾಗರ್ ಬ್ಯಾಟರ್. ಸಣ್ಣ ಬೌಂಡರಿಗಳಿರುವ ಮೈದಾನಗಳಲ್ಲಿ ಅಡ್ಡಾದಿಡ್ಡಿ ಬ್ಯಾಟ್ ಬೀಸುವ ಒಬ್ಬ 'ಬ್ಲೈಂಡ್ ಸ್ಲಾಗರ್' ಅಷ್ಟೇ" ಎಂದು ಹೇಳಿದ್ದಾರೆ.