ಮುಂಬೈ, ಜೂ. 27 (DaijiworldNews/AK): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ಇದೀಗ ರೋಚಕ ಘಟ್ಟಕ್ಕೆ ತಲುಪಿದೆ. ಜೂನ್ 28ರ ಭಾನುವಾರದಂದು ಲಂಡನ್ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗ್ರೂಪ್ ‘ಎ’ ಅಂತಿಮ ಲೀಗ್ ಪಂದ್ಯವು ಕೇವಲ ಟೀಮ್ ಇಂಡಿಯಾ ಅದೃಷ್ಟವನ್ನಷ್ಟೇ ಅಲ್ಲ, ಸೌತ್ ಆಫ್ರಿಕಾ ತಂಡದ ಸೆಮಿಫೈನಲ್ ಭವಿಷ್ಯವನ್ನೂ ನಿರ್ಧರಿಸಲಿದೆ. ಗ್ರೂಪ್- ಎ ಯಿಂದ ಈ ಬಾರಿ ಸೆಮಿಫೈನಲ್ಗೇರುವ ತಂಡಗಳಾವುವು ಎಂಬುದು ಭಾನುವಾರ ನಿರ್ಧಾರವಾಗಲಿದೆ.

ಲೀಗ್ ಹಂತದ ಪಂದ್ಯಗಳ ಮುಕ್ತಾಯದ ಬಳಿಕ ಗ್ರೂಪ್ ಪಟ್ಟಿಯ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್ಗೇರಲಿದೆ. ಗ್ರೂಪ್ ‘ಎ’ ಅಂಕ ಪಟ್ಟಿಯಲ್ಲಿ ಸದ್ಯ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಸೌತ್ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ.
ಭಾರತ ತಂಡವು ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮ್ಯಾಚ್ನಲ್ಲಿ ಗೆಲ್ಲಲೇಬೇಕು. ಅತ್ತ ಆಸ್ಟ್ರೇಲಿಯಾ ತಂಡ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ಗೇರಲಿದೆ. ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ಪಡೆಯನ್ನು ಸೋಲಿಸಿದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನೆಟ್ ರನ್ ರೇಟ್ ಮತ್ತಷ್ಟು ಉತ್ತಮಗೊಳ್ಳುವುದರಿಂದ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತವಾಗಲಿದೆ.
ಒಟ್ಟಾರೆ ಮಹಿಳಾ ಟಿ20 ವಿಶ್ವಕಪ್ನ ನಿರ್ಣಾಯಕ ಸೆಮಿಫೈನಲ್ ರೇಸ್ ಜೂನ್ 28ರ ಭಾರತ-ಆಸ್ಟ್ರೇಲಿಯಾ ಪಂದ್ಯದ ಮೇಲೆ ಅವಲಂಬಿತವಾಗಿದ್ದು, ಹರ್ಮನ್ಪ್ರೀತ್ ಕೌರ್ ಪಡೆಯು ಆಸೀಸ್ ಬಳಗವನ್ನು ಮಣಿಸಿ ನೇರವಾಗಿ ಸೆಮೀಸ್ಗೆ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದೆ.