ಮಿಯಾಮಿ, ಜೂ. 28 (DaijiworldNews/TA): ಫುಟ್ಬಾಲ್ ಲೋಕದ ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. 2026ರ ಫಿಫಾ ವಿಶ್ವಕಪ್ನಲ್ಲಿ ಜೋರ್ಡನ್ ವಿರುದ್ಧದ ಪಂದ್ಯದಲ್ಲಿ ಗೋಲು ದಾಖಲಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಸತತ ಏಳು ಪಂದ್ಯಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಅಪರೂಪದ ವಿಶ್ವದಾಖಲೆಯನ್ನು ಮೆಸ್ಸಿ ತಮ್ಮ ಹೆಸರಿಗೆ ಬರೆದಿದ್ದಾರೆ.

39 ವರ್ಷದ ಮೆಸ್ಸಿ, ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ 80ನೇ ನಿಮಿಷದಲ್ಲಿ ಅದ್ಭುತ ಫ್ರೀ-ಕಿಕ್ ಮೂಲಕ ಗೋಲು ಬಾರಿಸಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಫ್ರಾನ್ಸ್ನ ಜಸ್ಟ್ ಫಾಂಟೈನ್ ಹಾಗೂ ಬ್ರೆಜಿಲ್ನ ಜೈರ್ಜಿನ್ಹೋ ಅವರ ಹೆಸರಿನಲ್ಲಿದ್ದ ಸತತ ಆರು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
2022ರ ಫಿಫಾ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್, ಕ್ರೊಯೇಷಿಯಾ ಹಾಗೂ ಫ್ರಾನ್ಸ್ ವಿರುದ್ಧದ ನಾಕೌಟ್ ಪಂದ್ಯಗಳಲ್ಲಿ ಮೆಸ್ಸಿ ಸತತವಾಗಿ ಗೋಲು ಗಳಿಸಿದ್ದರು. 2026ರ ವಿಶ್ವಕಪ್ನಲ್ಲಿ ಅಲ್ಜೀರಿಯಾ, ಆಸ್ಟ್ರಿಯಾ ಹಾಗೂ ಜೋರ್ಡನ್ ವಿರುದ್ಧವೂ ಗೋಲು ದಾಖಲಿಸುವ ಮೂಲಕ ಅವರ ಸತತ ಗೋಲುಗಳ ಸಂಖ್ಯೆ ಏಳಕ್ಕೆ ಏರಿದೆ.
ಜೋರ್ಡನ್ ವಿರುದ್ಧದ ಗೋಲಿನೊಂದಿಗೆ ಮೆಸ್ಸಿ ವಿಶ್ವಕಪ್ನಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 19ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಮಹಿಳಾ ಹಾಗೂ ಪುರುಷರ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ್ದ ಬ್ರೆಜಿಲ್ನ ದಿಗ್ಗಜ ಆಟಗಾರ್ತಿ ಮಾರ್ಟಾ ಅವರ ದಾಖಲೆಯನ್ನು ಹಿಂದಿಕ್ಕಿ ವಿಶ್ವಕಪ್ನ ಸರ್ವಕಾಲಿಕ ಅಗ್ರ ಗೋಲುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೆಸ್ಸಿಯ ಅದ್ಭುತ ಪ್ರದರ್ಶನದ ನೆರವಿನಿಂದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ನ ರೌಂಡ್-32 ಹಂತಕ್ಕೆ ಪ್ರವೇಶಿಸಿದೆ. ಮುಂದಿನ ಸುತ್ತಿನಲ್ಲಿ ಅರ್ಜೆಂಟೀನಾ ತಂಡ ಕೇಪ್ ವರ್ಡೆ ವಿರುದ್ಧ ಸೆಣಸಲಿದ್ದು, ಈ ಪಂದ್ಯ ಜುಲೈ 4ರಂದು ಮಿಯಾಮಿಯಲ್ಲಿ ನಡೆಯಲಿದೆ.