ನವದೆಹಲಿ, ಜೂ. 30 (DaijiworldNews/AK):ಮುಂಬರುವ ಏಷ್ಯನ್ ಗೇಮ್ಸ್ 2026ಕ್ಕೆ ಬಿಸಿಸಿಐ ಬಲಿಷ್ಠ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧಾನ ಉಪನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಇತ್ತೀಚೆಗೆ ವಿಶ್ವಕಪ್ ಆಡಿದ್ದ ತಂಡಕ್ಕೆ ಹೋಲಿಸಿದರೆ, ಈ ಏಷ್ಯನ್ ಗೇಮ್ಸ್ ತಂಡದಲ್ಲಿ ಕೇವಲ ಒಂದು ಬದಲಾವಣೆಯನ್ನು ಮಾತ್ರ ಮಾಡಲಾಗಿದೆ. ಇನ್ನುಳಿದಂತೆ ಅದೇ ಆಟಗಾರ್ತಿಯರನ್ನು ಉಳಿಸಿಕೊಳ್ಳಲಾಗಿದೆ.
ತಂಡದಿಂದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಯಾಸ್ತಿಕಾ ಭಾಟಿಯಾ ಅವರನ್ನ ಕೈಬಿಡಲಾಗಿದ್ದು, ಅವರ ಜಾಗಕ್ಕೆ ಜಿ.ಕಮಲಿನಿ ಅವರಿಗೆ ಅವಕಾಶ ನೀಡಲಾಗಿದೆ. ಆರ್ಸಿಬಿ ತಂಡದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಅವರು ಸಂಪೂರ್ಣ ಫಿಟ್ ಆದರೆ ಮಾತ್ರ ಪಂದ್ಯಗಳನ್ನು ಆಡಲಿದ್ದಾರೆ. ವಿಶ್ವಕಪ್ ವೇಳೆ ಶ್ರೇಯಾಂಕಾ ಗಾಯಗೊಂಡಾಗ ಅವರ ಬದಲಿ ಆಟಗಾರ್ತಿಯಾಗಿ ಪ್ರೇಮಾ ರಾವತ್ ಆಡಿದ್ದರು. ಆದರೆ ಈಗ ಶ್ರೇಯಾಂಕಾ ತಂಡಕ್ಕೆ ಮರಳಿರುವುದರಿಂದ ಪ್ರೇಮಾ ರಾವತ್ ಅವರನ್ನ ಕೈಬಿಡಲಾಗಿದೆ.
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕುರ್, ಶ್ರೇಯಾಂಕಾ ಪಾಟೀಲ್*, ರಾಧಾ ಯಾದವ್, ನಂದಿನಿ ಶರ್ಮಾ.
2026ರ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3ರವರೆಗೆ ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಟಿ20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ ಏಷ್ಯಾದ ಪ್ರಮುಖ ಕ್ರಿಕೆಟ್ ತಂಡಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಹಲವು ತಂಡಗಳು ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಭಾಗವಹಿಸಲಿವೆ.