ನವದೆಹಲಿ, ಜು. 02 (DaijiworldNews/TA): ಇಂಗ್ಲೆಂಡ್ ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೇರಿದಂತೆ ಜಗತ್ತಿನ ಯಾವುದೇ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯಲ್ಲಿ ಇನ್ನು ಮುಂದೆ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆಯುವ ದೇಶೀಯ ಟೂರ್ನಿ 'ದಿ ಹಂಡ್ರೆಡ್' ಹೊರತುಪಡಿಸಿ ಬೇರೆ ಯಾವುದೇ ಲೀಗ್ನಲ್ಲಿ ತಾವು ಆಡಲು ಉದ್ದೇಶಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹ್ಯಾರಿ ಬ್ರೂಕ್ ಈ ಹಿಂದೆ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ದು, ಒಂದು ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ಬಳಿಕ 2025ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅವರನ್ನು ರೂ. 6.25 ಕೋಟಿಗೆ ಖರೀದಿಸಿತ್ತು. ಆದರೆ ಟೂರ್ನಿ ಆರಂಭಕ್ಕೂ ಮುನ್ನ ವೈಯಕ್ತಿಕ ಕಾರಣಗಳಿಂದ ಅವರು ಹಿಂದೆ ಸರಿದಿದ್ದರು.
ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ ಬ್ರೂಕ್, "ನಾನು ಇಂಗ್ಲೆಂಡ್ ಕ್ರಿಕೆಟ್ಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ. 'ದಿ ಹಂಡ್ರೆಡ್' ಹೊರತುಪಡಿಸಿ ಯಾವುದೇ ಫ್ರಾಂಚೈಸಿ ಕ್ರಿಕೆಟ್ ಆಡಲು ಬಯಸುವುದಿಲ್ಲ. ಇಂಗ್ಲೆಂಡ್ ಪರ ದೀರ್ಘಕಾಲ ಆಡಲು ಹಾಗೂ ನನ್ನ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವುದು ನನ್ನ ಪ್ರಮುಖ ಗುರಿಯಾಗಿದೆ" ಎಂದು ಹೇಳಿದ್ದಾರೆ.
ಅವರ ಈ ನಿರ್ಧಾರದಿಂದ ಐಪಿಎಲ್ ಮಾತ್ರವಲ್ಲದೆ ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ಎಲ್ಲಾ ಪ್ರಮುಖ ಫ್ರಾಂಚೈಸಿ ಲೀಗ್ಗಳಿಂದಲೂ ಅವರು ದೂರ ಉಳಿಯಲಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ನಲ್ಲಿ ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶವಿದ್ದರೂ, ಅದಕ್ಕಿಂತ ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ ಆಡುವುದೇ ತಮ್ಮ ಆದ್ಯತೆ ಎಂದು ಬ್ರೂಕ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದೀರ್ಘಾವಧಿಯ ವೃತ್ತಿಜೀವನ ಕಟ್ಟಿಕೊಳ್ಳುವ ಉದ್ದೇಶದಿಂದಲೇ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಹ್ಯಾರಿ ಬ್ರೂಕ್ ಈಗಾಗಲೇ ಐಪಿಎಲ್ನಿಂದ ಎರಡು ವರ್ಷಗಳ ನಿಷೇಧ ಎದುರಿಸುತ್ತಿದ್ದಾರೆ. 2025ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿದ್ದರೂ, ಟೂರ್ನಿಯಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಕಾರಣ ಐಪಿಎಲ್ ನಿಯಮದಂತೆ ಅವರಿಗೆ ಎರಡು ವರ್ಷಗಳ ಬ್ಯಾನ್ ವಿಧಿಸಲಾಗಿತ್ತು.
ಈ ನಿಷೇಧದಿಂದಾಗಿ ಅವರು 2027ರ ಐಪಿಎಲ್ ಮಿನಿ ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ. ನಿಯಮದ ಪ್ರಕಾರ 2028ರ ಮೆಗಾ ಹರಾಜಿನಲ್ಲಿ ಮಾತ್ರ ಮತ್ತೆ ಹೆಸರು ನೋಂದಾಯಿಸಬಹುದಾಗಿತ್ತು. ಆದರೆ ಅದಕ್ಕೂ ಮುನ್ನವೇ ಐಪಿಎಲ್ ಸೇರಿದಂತೆ ಯಾವುದೇ ಫ್ರಾಂಚೈಸಿ ಲೀಗ್ನಲ್ಲಿ ಇನ್ನು ಮುಂದೆ ಆಡದಿರುವುದಾಗಿ ಘೋಷಿಸಿರುವ ಬ್ರೂಕ್, ತಮ್ಮ ಸಂಪೂರ್ಣ ಗಮನವನ್ನು ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕೇಂದ್ರೀಕರಿಸಿದ್ದಾರೆ.