ನ್ಯೂಯಾರ್ಕ್, ಜು. 04 (DaijiworldNews/AA): ಈ ಬಾರಿಯ ಫಿಫಾ ವಿಶ್ವಕಪ್ ರೊನಾಲ್ಡೋಗೆ ಕೊನೆಯ ಟೂರ್ನಿಯಾಗಬಹುದು ಎಂದಿದ್ದ ಸಹೋದರಿ ಕಟಿಯಾ ಅವೆರೋ ಹೇಳಿಕೆಯನ್ನು ಪೋರ್ಚುಗಲ್ನ ಸ್ಟಾರ್ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೋ ನಿರಾಕರಿಸಿದ್ದಾರೆ.

ಪೋರ್ಚುಗಲ್ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ರೊನಾಲ್ಡೊ ಸಹೋದರಿ ಕಟಿಯಾ ಅವೇರೋ, ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇದು ರೊನಾಲ್ಡೊ ಅವರ ಕೊನೆಯ ಟೂರ್ನಿ. ಹಾಗಾಗಿ ಅವರು ಮೈದಾನದಲ್ಲಿ ಆಡುತ್ತಿರುವುದನ್ನು ನಾವೆಲ್ಲರೂ ಸಂಭ್ರಮಿಸಬೇಕು ಎಂದು ಹೇಳಿದ್ದರು. ಇದೀಗ ಅವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರೊನಾಲ್ಡೊ, ನಿವೃತ್ತಿಯ ವದಂತಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ.
"ಯಾವುದೇ ಕಾರಣಕ್ಕೂ ಆತುರದಲ್ಲಿ ನಿವೃತ್ತಿಯ ನಿರ್ಧಾರ ಕೈಗೊಳ್ಳುವುದಿಲ್ಲ. ವಿಶ್ವಕಪ್ನಲ್ಲಿ ಗೆಲುವು ಅಥವಾ ಸೋಲು ಏನೇ ಆದರೂ, ಅದರ ಬಳಿಕ ನಿವೃತ್ತಿಯ ಬಗ್ಗೆ ಯೋಚಿಸಲು ಸಾಕಷ್ಟು ಸಮಯವಿದೆ. ನನ್ನ ಕುಟುಂಬದ ಸದಸ್ಯರ ಜೊತೆ ಚರ್ಚಿಸಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.