ಮ್ಯಾಂಚೆಸ್ಟರ್, ಜು. 05 (DaijiworldNews/TA): ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದರೂ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಟಾಪ್-7 ಬ್ಯಾಟಿಂಗ್ ಕ್ರಮದಲ್ಲಿ ಆರು ಎಡಗೈ ಬ್ಯಾಟರ್ಗಳನ್ನು ಕಣಕ್ಕಿಳಿಸುವ ಮೂಲಕ ಹೊಸ ಇತಿಹಾಸ ಬರೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 190 ರನ್ಗಳ ಗುರಿ ನೀಡಿತ್ತು. ಈ ಗುರಿಯನ್ನು ಇಂಗ್ಲೆಂಡ್ 19 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪಿದ್ದು, 4 ವಿಕೆಟ್ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಭಾರತ ಪರ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಎಡಗೈ ಬ್ಯಾಟರ್ಗಳಾಗಿ ಕಣಕ್ಕಿಳಿದಿದ್ದರು. ಟಾಪ್-7 ಬ್ಯಾಟರ್ಗಳ ಪೈಕಿ ನಾಯಕ ಶ್ರೇಯಸ್ ಅಯ್ಯರ್ ಮಾತ್ರ ಬಲಗೈ ಬ್ಯಾಟರ್ ಆಗಿದ್ದರು.
ಈ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಟಾಪ್-7 ಬ್ಯಾಟಿಂಗ್ ಕ್ರಮದಲ್ಲಿ ಆರು ಎಡಗೈ ಬ್ಯಾಟರ್ಗಳನ್ನು ಆಡಿಸಿದ ಮೊದಲ ತಂಡ ಎಂಬ ವಿಶ್ವ ದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ. ಈ ಹಿಂದೆ ವೆಸ್ಟ್ ಇಂಡೀಸ್ ತಂಡವು ಟಿ20 ಪಂದ್ಯವೊಂದರಲ್ಲಿ ಐವರು ಎಡಗೈ ಬ್ಯಾಟರ್ಗಳನ್ನು ಕಣಕ್ಕಿಳಿಸಿ ದಾಖಲೆ ನಿರ್ಮಿಸಿತ್ತು. ಆ ತಂಡದಲ್ಲಿ ಕ್ರಿಸ್ ಗೇಲ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ ಹಾಗೂ ಡ್ಯಾರೆನ್ ಬ್ರಾವೋ ಸ್ಥಾನ ಪಡೆದಿದ್ದರು.
ಈಗ ಭಾರತ ಆ ದಾಖಲೆಯನ್ನು ಹಿಂದಿಕ್ಕಿ, ಆರು ಎಡಗೈ ಬ್ಯಾಟರ್ಗಳನ್ನು ಕಣಕ್ಕಿಳಿಸಿದ ಮೊದಲ ತಂಡವಾಗಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಸೋಲಿನ ನಿರಾಸೆಯ ನಡುವೆಯೂ ಟೀಂ ಇಂಡಿಯಾ ನಿರ್ಮಿಸಿದ ಈ ಅಪರೂಪದ ವಿಶ್ವ ದಾಖಲೆ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.