ಲಾಸ್ ಏಂಜಲೀಸ್, ಜು. 07 (DaijiworldNews/AK): 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಪೋರ್ಚುಗಲ್ ವಿರುದ್ಧ ಸ್ಪೇನ್ 1-0 ಗೋಲು ಅಂತರದಲ್ಲಿ ಜಯಗಳಿಸಿದೆ. ಈ ಮೂಲಕ ಸ್ಪೇನ್ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದು, ವಿಶ್ವಕಪ್ ಟೂರ್ನಿಯಿಂದ ಪೋರ್ಚುಗಲ್ ತಂಡ ಹೊರದಬ್ಬಿದೆ.ಇದರೊಂದಿಗೆ ಪೋರ್ಚುಗಲ್ನ ಫುಟ್ಬಾಲ್ ದಿಗ್ಗಜ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೋ ಅವರ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಪಂದ್ಯದ ದ್ವಿತೀಯಾರ್ಧದ ಇಂಜುರಿ ಟೈಮ್ನಲ್ಲಿ (90+1 ನಿಮಿಷದಲ್ಲಿ) ಬದಲಿ ಆಟಗಾರನಾಗಿ ಕಣಕ್ಕಿಳಿದ ಮೈಕೆಲ್ ಮೆರಿನೊ ಅದ್ಭುತ ಗೋಲು ಬಾರಿಸುವ ಮೂಲಕ ಸ್ಪೇನ್ಗೆ ಸ್ಮರಣೀಯ ಗೆಲುವು ತಂದುಕೊಟ್ಟರು. 2010ರ ಚಾಂಪಿಯನ್ ಸ್ಪೇನ್, ಇದೀಗ ಮಗದೊಂದು ಸಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಲ್ಲದೇ ಫಿಫಾ ವಿಶ್ವಕಪ್ನಲ್ಲಿ ಸತತ 6 ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದ ಸಾಧನೆ ಮಾಡಿದ ಮೊದಲ ತಂಡವೆನಿಸಿದೆ.
ಈ ಪಂದ್ಯದಲ್ಲಿ ರೊನಾಲ್ಡೊ ಹಾಗೂ ಸ್ಪೇನ್ನ 18 ವರ್ಷದ ಲಮೈನ್ ಯಮಾಲ್ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಪೋರ್ಚುಗಲ್ ಕನಸು ಭಗ್ನಗೊಂಡಿದ್ದು. ಸೋಲಿನ ಬಳಿಕ ರೊನಾಲ್ಡೋ ಮೈದಾನದಲ್ಲೇ ಕಣ್ಣೀರಿಟ್ಟು ಭಾವುಕರಾದರು. ಆದರೆ ರೊನಾಲ್ಡೋ ಅವರ ವಿಶ್ವಕಪ್ ಪಯಣ ಕಣ್ಣೀರಿನೊಂದಿಗೆ ಅಂತ್ಯಗೊಂಡಿತು.
ಇತ್ತೀಚೆಗಷ್ಟೇ ರೊನಾಲ್ಡೋ ಅವರ ಸಹೋರದರಿ ನಿವೃತ್ತಿಯ ಬಗ್ಗೆ ಸುಳಿವು ಕೊಟ್ಟಿದ್ದರು. ಈ ಬಾರಿಯ ಫಿಫಾ ವಿಶ್ವಕಪ್ ರೊನಾಲ್ಡೋಗೆ ಕೊನೆಯ ಟೂರ್ನಿಯಾಗಬಹುದು ಎಂದಿದ್ದರು. ಆದ್ರೆ ರೊನಾಲ್ಡೋ ಇದನ್ನು ಸ್ಪಷ್ಟವಾಗಿ ತಿರಸ್ಕರಿದ್ದರು.