ಮುಂಬೈ,ಜು. 21 (DaijiworldNews/AK): ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಹಾಗೂ ತಂಡದಲ್ಲಿನ ಸ್ಥಾನದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅಶ್ವಿನ್, ರೋಹಿತ್ ಮತ್ತು ಕೊಹ್ಲಿ ಅವರ ಸ್ಥಾನವನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡುವ ಧೈರ್ಯ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೆಟ್ಟದಷ್ಟು ರನ್ ಗಳಿಸಿ ದಶಕಗಳಿಂದ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರನ್ನು ಕೈ ಬಿಡುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ರೋಹಿತ್ ಒಬ್ಬರೇ ಏಕದಿನ ಕ್ರಿಕೆಟ್ನಲ್ಲಿ ಸುಮಾರು 12,000 ರನ್ಗಳಿಸಿದ್ದಾರೆ.
ಇಂತಹ ದಿಗ್ಗಜ ಆಟಗಾರರನ್ನು ಕೇವಲ ಕೆಲವು ಪಂದ್ಯಗಳ ಕಳಪೆ ಫಾರ್ಮ್ ಆಧರಿಸಿ ದಿಢೀರನೆ ತಂಡದಿಂದ ಹೊರಹಾಕುವ ಧೈರ್ಯ ಯಾವುದೇ ಆಯ್ಕೆಗಾರರಿಗೆ ಇರುವುದಿಲ್ಲ. ಅಂತಹ ಧೈರ್ಯವನ್ನು ಸಹ ಮಾಡಬೇಡಿ ಎಂದು ಅಶ್ವಿನ್ ಕಿವಿಮಾತು ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ದೊಡ್ಡ ಪಡೆಯೇ ಇದೆ. ಒಂದು ವೇಳೆ ಆಯ್ಕೆ ಸಮಿತಿಯು ಇವರಿಬ್ಬರನ್ನು ತಂಡದಿಂದ ಕೈಬಿಡುವ ತೀರ್ಮಾನಕ್ಕೆ ಬಂದರೆ, ದೇಶಾದ್ಯಂತ ಅಭಿಮಾನಿಗಳಿಂದ ತಡೆಯಲು ಸಾಧ್ಯವಾಗದಂತಹ ಭಾರಿ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡುವಂತಹ ನಿರ್ಧಾರಕ್ಕೆ ಕೈ ಹಾಕಬೇಡಿ ಅಶ್ವಿನ್ ಎಚ್ಚರಿಸಿದ್ದಾರೆ.