ಗ್ಲಾಸ್ಗೋ,ಜು. 23 (DaijiworldNews/AK): ಕಾಮನ್ವೆಲ್ತ್ ಕ್ರೀಡಾಕೂಟ ಆರಂಭವಾಗುವುದಕ್ಕೂ ಮುನ್ನವೇ ಭಾರತಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸ್ಕಾಟ್ಲ್ಯಾಂಡ್ನ ಬಂದರು ನಗರಿ ಗ್ಲಾಸ್ಗೋದಲ್ಲಿ ಕಾಮನ್ವೆಲ್ತ್ ಗೇಮ್ಸ್ 2026 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಕ್ರೀಡಾಕೂಟದ ಅಧಿಕೃತ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಭಾರತಕ್ಕೆ ಕನಿಷ್ಠ ಒಂದು ಪದಕ ಖಚಿತವಾಗಿದೆ.

ಒಲಿಂಪಿಕ್ ಪದಕ ವಿಜೇತೆ, ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನು ಖಾತ್ರಿಪಡಿಸಿದ್ದಾರೆ.
ಅಸ್ಸಾಂ ಮೂಲದ ಖ್ಯಾತ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು 75 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಬೈ (Bye) ಪಡೆಯುವ ಮೂಲಕ ನೇರವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ ಬಾಕ್ಸಿಂಗ್ ನಿಯಮಾವಳಿಗಳ ಪ್ರಕಾರ, ಸೆಮಿಫೈನಲ್ನಲ್ಲಿ ಸೋಲುವ ಇಬ್ಬರೂ ಸ್ಪರ್ಧಿಗಳಿಗೂ ಕಂಚಿನ ಪದಕ ನೀಡಲಾಗುತ್ತದೆ. ಹೀಗಾಗಿ ಲವ್ಲಿನಾ ಅವರು ರಿಂಗ್ಗೆ ಇಳಿಯುವ ಮೊದಲೇ ಭಾರತಕ್ಕೆ ಪದಕದ ಖಾತೆ ತೆರೆಯುವುದು ನಿಶ್ಚಿತವಾಗಿದೆ.
ಲವ್ಲಿನಾ ಜುಲೈ 31 ರಂದು ತಮ್ಮ ಮೊದಲ ಪಂದ್ಯದಲ್ಲಿ ತಾಫಾಕಿ ಅವರ ವಿರುದ್ಧ ಸೆಣಸಲಿದ್ದು, ಗೆದ್ದರೆ ಫೈನಲ್ಗೆ ಪ್ರವೇಶಿಸಿ ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ.