ಒಟ್ಟಾವಾ,ಜು. 26 (DaijiworldNews/AK): ಭಾರತದ ಯುವ ಸ್ಕ್ವಾಶ್ ತಾರೆ ಅನಾಹತ್ ಸಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. 18 ವರ್ಷ ವಯಸ್ಸಿನ ಅನಾಹತ್, ಕೆನಡಾದ ನಿಯಾಗ್ರಾ-ಆನ್-ದಿ-ಲೆಕ್ನಲ್ಲಿ ನಡೆದ 2026ರ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಜುಲೈ 25 (ಶನಿವಾರ) ನಡೆದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಅನಾಹತ್, 2ನೇ ಶ್ರೇಯಾಂಕದ ಈಜಿಪ್ಟ್ನ ರುಕಯ್ಯಾ ಸಲೇಮ್ ಅವರನ್ನ 11-3, 11-7, 11-9 ನೇರ ಸೆಟ್ಗಳ ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಈ ಸಾಧನೆ ಭಾರತೀಯ ಸ್ಕ್ವಾಶ್ ಇತಿಹಾಸದಲ್ಲಿ ವಿಶೇಷ ಮೈಲಿಗಲ್ಲಾಗಿದೆ. ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ಭಾರತೀಯ ಆಟಗಾರ ಅಥವಾ ಆಟಗಾರ್ತಿ ಪ್ರಶಸ್ತಿ ಗೆದ್ದಿರಲಿಲ್ಲ. 2005 ರಲ್ಲಿ ಫೈನಲ್ ಪ್ರವೇಶಿಸಿದ್ದ ಜೋಶ್ನಾ ಚಿನಪ್ಪ ಅವರ ಸಾಧನೆಯನ್ನ ಮೀರಿಸಿರುವ ಅನಾಹತ್, ಇದೀಗ ವಿಶ್ವ ಚಾಂಪಿಯನ್ ಆಗಿ ಹೊಸ ದಾಖಲೆ ಬರೆದಿದ್ದಾರೆ.
ಅನಾಹತ್ ಸಿಂಗ್ ಅವರ ಈ ಗೆಲುವು ಮಹಿಳೆಯರ ಜೂನಿಯರ್ ಸ್ಕ್ವಾಶ್ನಲ್ಲಿ ಈಜಿಪ್ಟ್ನ ಸುದೀರ್ಘ ಪ್ರಾಬಲ್ಯಕ್ಕೂ ತೆರೆ ಎಳೆದಿದೆ.
2011 ರಿಂದ ಸತತ 13 ಆವೃತ್ತಿಗಳವರೆಗೆ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಈಜಿಪ್ಟ್ ಆಟಗಾರ್ತಿಯರ ಪಾಲಾಗುತ್ತಿತ್ತು. ಅನಾಹತ್ ಈ ಸರಣಿಗೆ ಅಂತ್ಯ ಹಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಇದಲ್ಲದೆ, 2010ರಲ್ಲಿ ಅಮೆರಿಕದ ಅಮಾಂಡಾ ಸೋಭಿ ಬಳಿಕ ವಿಶ್ವ ಜೂನಿಯರ್ ಚಾಂಪಿಯನ್ ಪಟ್ಟ ಗೆದ್ದ ಮೊದಲ ಈಜಿಪ್ಟ್ಯೇತರ ಆಟಗಾರ್ತಿಯಾಗಿಯೂ ಅನಾಹತ್ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.