ಗ್ಲ್ಯಾಸ್ಗೋ, ಜು. 26 (DaijiworldNews/AA): 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಭಾರತದ ದಿಗ್ಗಜ ವೇಟ್ಲಿಫ್ಟರ್ ಮೀರಾಬಾಯಿ ಚಾನು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ಚಿನ್ನದ ಪದಕವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮಣಿಪುರದ ಕ್ರೀಡಾಪಟು ಮೀರಾಬಾಯಿ ಚಾನು, ಸ್ನ್ಯಾಚ್ ಹಾಗೂ ಕ್ಲೀನ್ ಅಂಡ್ ಜರ್ಕ್ ಎರಡೂ ವಿಭಾಗಗಳಲ್ಲಿ ಹೊಸ ಕಾಮನ್ವೆಲ್ತ್ ಗೇಮ್ಸ್ ದಾಖಲೆ ಬರೆದಿದ್ದಾರೆ. ಸ್ನ್ಯಾಚ್ 85 ಕೆಜಿ (ಕಾಮನ್ವೆಲ್ತ್ ಮತ್ತು ಗೇಮ್ಸ್ ದಾಖಲೆ), ಕ್ಲೀನ್ ಅಂಡ್ ಜರ್ಕ್ 105 ಕೆಜಿ (ಗೇಮ್ಸ್ ದಾಖಲೆ) ಒಟ್ಟು 190 ಕೆಜಿ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಬೆಳ್ಳಿ ಪದಕ ಗೆದ್ದ ನೈಜೀರಿಯಾದ ರೂತ್ ಅಸುಕ್ವೊ ನ್ಯಾಂಗ್ (ಒಟ್ಟು 168 ಕೆಜಿ) ಅವರಿಗಿಂತ ಮೀರಾಬಾಯಿ ಚಾನು ಅವರು ಬರೋಬ್ಬರಿ 22 ಕೆಜಿ ಹೆಚ್ಚಿನ ತೂಕ ಎತ್ತಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅವರು ಭಾರತಕ್ಕೆ ಈ ಬಾರಿಯ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.